ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದರೆ ಬುದ್ದಿ ಕಲಿಸುತ್ತೇವೆ: ದಿನೇಶ್‌ಗುಂಡೂರಾವ್

Update: 2018-04-14 15:14 GMT

ಬೆಂಗಳೂರು, ಎ.14: ಅತ್ಯಾಚಾರದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕನ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಯುವತಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಶನಿವಾರ ನಗರದ ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅತ್ಯಾಚಾರ ಮಾಡಿರುವ ಶಾಸಕನ ವಿರುದ್ಧ ಯಾವುದೆ ಕ್ರಮ ಕೈಗೊಳ್ಳದೆ ಇರುವ ಯೋಗಿ ಆದಿತ್ಯನಾಥ್ ನಮ್ಮ ರಾಜ್ಯಕ್ಕೆ ಬಂದರೆ ಬುದ್ಧಿ ಕಲಿಸುತ್ತೇವೆ ಎಂದು ದಿನೇಶ್‌ಗುಂಡೂರಾವ್ ವಾಗ್ದಾಳಿ ನಡೆಸಿದರು.

ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಬಾಲಕಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮೇಣದ ಬತ್ತಿಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ, ಮೇಯರ್ ಸಂಪತ್‌ರಾಜ್, ಸೌಮ್ಯಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News