ದಲಿತರು, ಹಿಂದುಳಿದವರು ಬಿಜೆಪಿಗೆ ಮತ ಹಾಕಿದರೆ, ಅದು ಆತ್ಮದ್ರೋಹಕ್ಕೆ ಸಮ: ಪ್ರೊ.ಜಿ.ಕೆ.ಗೋವಿಂದರಾವ್

Update: 2018-04-14 15:19 GMT

ಬೆಂಗಳೂರು, ಎ.14: ದಲಿತರು, ಮಹಿಳೆಯರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನತೆ ಬಿಜೆಪಿಗೆ ಮತ ಹಾಕಿದರೆ ತಮಗೆ ತಾವು ಮಾಡಿಕೊಂಡ ಆತ್ಮದ್ರೋಹವೆಂದು ಹಿರಿಯ ಚಿಂತಕ ಜಿ.ಕೆ.ಗೋವಿಂದರಾವ್ ಅಭಿಪ್ರಾಯಿಸಿದರು.

ಶನಿವಾರ ಪ್ರಜಾ ವಿಮೋಚನಾ ಚಳವಳಿ ನಗರದ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೆ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕನಿಷ್ಟ 50 ಸೀಟು ಸಿಕ್ಕರೂ ದಲಿತರು, ಹಿಂದುಳಿದ ಸಮುದಾಯಕ್ಕೆ ಅವಮಾನವಾದಂತೆಯೆ ಎಂದು ಅವರು ಹೇಳಿದರು.

ದಲಿತ, ಹಿಂದುಳಿದ ಸಮುದಾಯದವರ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಬೇಕಾದರೆ ಅಂಬೇಡ್ಕರ್‌ರವರ ಬದುಕು-ಬರಹಗಳನ್ನು ಓದಬೇಕು. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಬದುಕಿನಲ್ಲಿ ಜೀವನೋತ್ಸಾವ ಕುಂದದಂತೆ ಕೋಮುವಾದಿಗಳ ವಿರುದ್ಧ ರಾಜಿರಹಿತ ಹೋರಾಟ ಮಾಡಬೇಕಾಗಿದೆ ಎಂದು ಅವರು ಆಶಿಸಿದರು.

ದೇಶದಲ್ಲಿ ನೂರಾರು ವರ್ಷಗಳಿಂದಲೂ ದಲಿತ ಹಾಗೂ ಬ್ರಾಹ್ಮಣರ ನಡುವೆ ನಿರಂತರವಾದ ಯುದ್ಧ ನಡೆಯುತ್ತಿದೆ. ಬ್ರಾಹ್ಮಣರು ತಮ್ಮ ಕಪಟ ಬುದ್ಧಿಯಿಂದ ದಲಿತ ಸಮುದಾಯವನ್ನು ಶೋಷಿಸುತ್ತಾ ಬಂದಿದ್ದಾರೆ. ಇದರ ವಿರುದ್ಧವಾಗಿ ಮಹಾವೀರ, ಬುದ್ಧ, ಬಸವಣ್ಣನ ಹಾದಿಯಾಗಿ ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೈದಿಕಶಾಹಿಗಳ ವಿರುದ್ಧ ವೈಚಾರಿಕೆ ಸಮರ ಸಾರಿದ್ದಾರೆ. ಅವರ ಚಿಂತನೆಗಳಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದು ಅವರು ಹೇಳಿದರು.

ಭಾರತದ ಕುರಿತು ನಿಜವಾದ ಕಾಳಜಿಯಿರುವವರು ವೈದಿಕ ಚಿಂತನೆಗಳನ್ನು ಪೋಷಿಸುತ್ತಿರುವ ಆರೆಸ್ಸೆಸ್‌ನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ. ಹಾಗೂ ಇಂತಹ ಕೋಮುವಾದಿ ಸಂಘಟನೆಗಳನ್ನು ನಿರಂತರವಾಗಿ ಪ್ರಶ್ನಿಸುವ ಮೂಲಕ ಅದರ ವ್ಯಾಪ್ತಿಯನ್ನು ಕುಗ್ಗಿಸಬೇಕಾಗಿದೆ. ಆ ಮೂಲಕ ಜನತೆಯಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಜಾ ವಿಮೋಚನಾ ಚಳವಳಿಯ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ, ಕಾಂಗ್ರೆಸ್ ಮುಖಂಡ ಕೆ.ರಘುಪತಿರೆಡ್ಡಿ, ಪಿವಿಸಿ ಮುಖಂಡರಾದ ಎಸ್.ವೈ.ಗುರುಶಾಂತ್, ಎಂ.ಎಂ.ಸ್ವಾಮಿ, ಕೊಪ್ಪಗೇಟ್ ರವಿ, ಅತ್ತಿಬೆಲೆ ರಘನಾಥ್, ಯಡವನಹಳ್ಳಿ ಕೃಷ್ಣಪ್ಪ ಮತ್ತಿತರರಿದ್ದರು.

ಪ್ರಧಾನಿ ನರೇಂದ್ರ ಮೋದಿಯ ಸೂಚನೆಯ ಮೇರೆಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಾಯಿಸಲಾಗುವುದು ಎಂಬ ಹೇಳಿಕೆ ನೀಡಿದ್ದಾರೆ. ಹೀಗೆ ಬಿಜೆಪಿ ಪರೀಕ್ಷಾರ್ಥಕವಾಗಿ ಇಂತಹ ಹೇಳಿಕೆಗಳನ್ನು ಕೆಲವು ಸಚಿವರ ಬಾಯಿಂದ ಹೇಳಿಸುತ್ತಾ ಜನಪರ ಕಾನೂನುಗಳನ್ನು ಬದಲಾಯಿಸುವಂತಹ ಪ್ರಕ್ರಿಯೆಯಲ್ಲಿ ತೊಡಗಿದೆ.
-ಜಿ.ಕೆ.ಗೋವಿಂದ ರಾವ್ ಹಿರಿಯ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News