ಬೆಂಗಳೂರು: ದಸಂಸ ವತಿಯಿಂದ ಮತದಾನದ ಕುರಿತು ಜಾಗೃತಿ ಜಾಥಾ

Update: 2018-04-14 15:22 GMT

ಬೆಂಗಳೂರು, ಎ.14: ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೆ ಜನ್ಮ ದಿನೋತ್ಸವದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆವರೆಗೂ ಆಯೋಜಿಸಿದ್ದ ಮತದಾನದ ಕುರಿತು ಜಾಗೃತಿ ಮೆರವಣಿಗೆಯಲ್ಲಿ ಭಾಗವಹಿಸಿಸ್ದ ದಸಂಸ ಕಾರ್ಯಕರ್ತರು ಕಡ್ಡಾಯ ಮತದಾನದ ಕುರಿತ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಡಾ.ಸಿ.ಎಸ್.ರಘು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮುಖ್ಯವಾದ ಘಟ್ಟವಾಗಿರುತ್ತದೆ. ಮತದಾನಕ್ಕೆ ಅರ್ಹತೆ ಹೊಂದಿರುವ ಪ್ರತಿಯೊಬ್ಬರು ಮತದಾನ ಮಾಡಿದಾಗ ಮಾತ್ರ ಚುನಾವಣಾ ಪ್ರಕ್ರಿಯೆ ಪರಿಪೂರ್ಣತೆ ಪಡೆಯಲು ಸಾಧ್ಯ. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡೆವು ಎಂದು ತಿಳಿಸಿದರು.

ಮತದಾನದಲ್ಲಿ ಭಾಗವಹಿಸಲು ಇಚ್ಛಿಸುವವರು ತಾನು ಯಾರಿಗೆ ಮತ ಹಾಕಬೇಕೆಂದು ಚಿಂತನೆ ಮಾಡಲು ಪ್ರಾರಂಭಿಸುತ್ತಾನೆ. ಇದು ಸಾಧ್ಯವಾಗಬೇಕಾದರೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದ್ದು, ಮತದಾರರು ಜನಪರ ಆಶಯವುಳ್ಳ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News