ಪಕ್ಷದ ಮುಖಂಡರ ಸೂಚನೆಯಂತೆ ಕಥುವಾ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ: ಬಿಜೆಪಿ ಸಚಿವ

Update: 2018-04-14 17:58 GMT

ಶ್ರೀನಗರ, ಎ.14: ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳ ಪರ ಕಥುವಾದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಪಕ್ಷದ ಹಿರಿಯರ ಸೂಚನೆಯಂತೆ ತೆರಳಿದ್ದುದಾಗಿ ಜಮ್ಮು ಮತ್ತು ಕಾಶ್ಮೀರ ಸರಕಾರದಲ್ಲಿ ಸಚಿವರಾಗಿರುವ ಬಿಜೆಪಿಯ ಚಂದರ್ ಪ್ರಕಾಶ್ ಗಂಗಾ ಶನಿವಾರ ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷರಾದ ಸತ್ ಶರ್ಮಾ ನೀಡಿದ ಸೂಚನೆಯಂತೆ ನಾವು ಕಥುವಾಗೆ ತೆರಳಿದ್ದೆವು. ಈಗಾಗಲೇ ಈ ಪ್ರಕರಣದ ತನಿಖೆಯನ್ನು ಮೂರು ಬಾರಿ ಕೈ ಬದಲಾಯಿಸಿರುವುದರಿಂದ ತನಿಖೆಯ ಮೇಲೆ ನಂಬಿಕೆ ಉಳಿದಿಲ್ಲ. ಹಾಗಾಗಿ ಸಿಬಿಐ ತನಿಖೆ ನಡೆಸುವಂತೆ ಅಲ್ಲಿನ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಪಕ್ಷದ ಮಾನವನ್ನು ಕಾಪಾಡಲು ನಾನು ನನ್ನನ್ನೇ ಬಲಿನೀಡುತ್ತಿದ್ದೇನೆ. ಹಾಗೆ ಮಾಡಲು ನನಗೆ ಯಾವುದೇ ಬೇಸರವಿಲ್ಲ ಎಂದು ಗಂಗಾ ಆಂಗ್ಲ ಸುದ್ದಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿಗಳ ಪರ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಗಂಗಾ ಮತ್ತು ಅವರ ಸಂಪುಟ ಸಹೋದ್ಯೋಗಿ ಲಾಲ್ ಸಿಂಗ್ ದೇಶಾದ್ಯಂತ ಜನರ ಆಕ್ರೋಶವನ್ನು ಎದುರಿಸಬೇಕಾಗಿ ಬಂದಿತ್ತು. ಇದೇ ಕಾರಣದಿಂದ ಅವರು ಶುಕ್ರವಾರದಂದು ಪಕ್ಷದ ರಾಜ್ಯಾಧ್ಯಕ್ಷ ಸತ್ ಶರ್ಮಾರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಇದಕ್ಕೂ ಮುನ್ನ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಲಾಲ್ ಸಿಂಗ್, ಕಥುವಾದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ತಾವು ಅಲ್ಲಿಗೆ ತೆರಳಿ ರ್ಯಾಲಿಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದರು.

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮುಗ್ಧರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಹಿಂದೂ ಏಕ್ತಾ ಮಂಚ್ ಎಂಬ ಸಂಘಟನೆ ಕಥುವಾದಲ್ಲಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಬಿಜೆಪಿಯ ಲಾಲ್ ಸಿಂಗ್ ಮತ್ತು ಚಂದರ್ ಪ್ರಕಾಶ್ ಗಂಗಾ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News