ಅಭ್ಯರ್ಥಿ ಮತಯಾಚನೆಗೆ ಬಂದಾಗ ಕನ್ನಡ ನಾಡಿಗಾಗಿ ಏನು ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸಿ: ಪ್ರೊ.ಚಂದ್ರಶೇಖರ್ ಪಾಟೀಲ್

Update: 2018-04-14 18:23 GMT

ಬೆಂಗಳೂರು, ಎ.14: ನಿಮ್ಮ ಮನೆಗೆ ಯಾವುದೇ ಅಭ್ಯರ್ಥಿ ಮತಯಾಚನೆಗೆ ಬಂದಾಗ ಕನ್ನಡ ನಾಡಿಗಾಗಿ ಏನು ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸಿ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಮನೆ ಬಳಿಗೆ ಮತಯಾಚನೆ ಮಾಡಲು ಬಂದ ಸಂದರ್ಭದಲ್ಲಿ ಭಾಷೆ, ಉದ್ಯೋಗ, ನೀರಾವರಿ ಸೇರಿದಂತೆ ಕನ್ನಡ ನಾಡಿಗಾಗಿ ಏನು ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸಬೇಕು ಎಂದು ಹೇಳಿದರು.

ಚಿಂತಕ ಮರುಳಸಿದ್ದಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಸಂಬಂಧ ಚಕ್ರವರ್ತಿಗಳು ಮತ್ತು ಅವರ ಕೆಳಗಿನ ಸಾಮಂತ ಅರಸರ ರೀತಿಯಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಹೇರಿಕೆಯಿಂದ ಸ್ಥಳೀಯ ಭಾಷಿಕರು ಬ್ಯಾಂಕಿಂಗ್ ಹಾಗೂ ರೈಲ್ವೆಯಲ್ಲಿ ಉದ್ಯೋಗ ಪಡೆಯುವುದು ಕಷ್ಟವಾಗಿದೆ. ಒಂದೇ ರಾಷ್ಟ್ರ, ಒಂದೇ ಭಾಷೆ ಮತ್ತು ಒಂದೇ ಧರ್ಮ ಉಳಿದದ್ದು ಈ ಪರಿಕಲ್ಪನೆಯ ಬಾಲಂಗೋಚಿಗಳ ರೀತಿಯಲ್ಲಿ ಬದುಕಬೇಕು ಎಂದು ಹೇಳುತ್ತಾರೆ. ಅದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದರು.

ನಾಡ ಗೀತೆ ಇರುವುದಾದರೆ ನಾಡ ಧ್ವಜ ಏಕೆ ಇರಬಾರದು. ಕರ್ನಾಟಕ ಭಾರತಗಿಂತ ಪ್ರಾಚೀನವಾದದ್ದು, ಸಾವಿರಾರು ವರ್ಷಗಳಿಂದ ಈ ನಾಡು, ಭಾಷೆ ಇದೆ. ಅದಕ್ಕೆ ಪ್ರತ್ಯೇಕ ಧ್ವಜ ಇರಬೇಕು ಎಂಬುದು ನಮ್ಮ ಅಸ್ಮಿತೆಯ ವಿಚಾರ. ಅದಕ್ಕೆ ಅವರ ಅನುಮತಿ ಪಡೆಯಬೇಕು ಎಂಬುದು ಹಾಸ್ಯಾಸ್ಪದ ವಿಚಾರ. ಹೀಗೆ ಮಾತನಾಡಿದರೆ ನಾವು ದೇಶದ್ರೋಹಿಗಳಾಗುತ್ತೇವೆ. ಇಂತಹ ಕೆಲ ಮೂಲ ವಿಚಾರಗಳನ್ನು ನಾವು ಪ್ರಶ್ನಿಸಬೇಕು ಎಂದು ಹೇಳಿದರು.

ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಶಾಸ್ತ್ರೀಯ ಭಾಷೆಗೆ ಸೌಲಭ್ಯ ಒದಗಿಸುವುದು, ಕನ್ನಡದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದು, ನೀರಾವರಿ ಯೋಜನೆ ಸಮರ್ಪಕ ಜಾರಿ ಸೇರಿದಂತೆ ಕನ್ನಡ ಕನ್ನಡಿಗ ಕರ್ನಾಟಕ ಎಂಬ ತತ್ವಕ್ಕೆ ಬದ್ಧರಾಗಿರುವ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು. ಮತಯಾಚನೆಗೆ ಬರುವ ಅಭ್ಯರ್ಥಿಗಳಲ್ಲಿ ಕನ್ನಡಕ್ಕಾಗಿ ಅವರು ಮಾಡಿರುವ ಕೆಲಸ ಏನೆಂದು ಪ್ರಶ್ನಿಸಬೇಕಿದೆ ಎಂದು ತಿಳಿಸಿದರು.

ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿಯನ್ನು ಶಾಸನಬದ್ಧ ಕಾನೂನಾಗಿ ಜಾರಿಗೆ ತರಬೇಕು. ಕನ್ನಡಿಗರಿಗೆ ಉದ್ಯೋಗ, ಬ್ಯಾಂಕುಗಳಲ್ಲಿ, ಕೇಂದ್ರ ಸ್ವಾಮ್ಯದ ಕಾರ್ಖಾನೆಗಳು ಹಾಗೂ ಕಚೇರಿಗಳ ನೇಮಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ರಾಜ್ಯದ ಸಕಲ ನೆರವು, ಸೌಲಭ್ಯಗಳನ್ನು ಪಡೆಯುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಕೆಲಸ ದೊರೆಯುವ ವಾತಾವರಣ ನಿರ್ಮಾಣವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ಸರಕಾರದಿಂದ ತರಬೇತಿ ಶಿಬಿರಗಳನ್ನು ನಡೆಸಿ, ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಸುವಂತಾಗಬೇಕು. ಕೇಂದ್ರ ಸರಕಾರದ ಕಚೇರಿ, ಉದ್ಯಮ ಮತ್ತು ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರ ನಿಯಮ ಜಾರಿಯಾಗಬೇಕು.

ಕೆಳಹಂತದ ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. 1ರಿಂದ 10ನೇ ತರಗತಿವರೆಗೆ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದು ಸೇರಿದಂತೆ ಕನ್ನಡಪರವಾದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಹಾಗೂ ಈಡೇರಿಸುವ ಭರವಸೆ ನೀಡುವ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಮತ ಹಾಕಲಾಗುವುದು. ಈ ನಿಟ್ಟಿನಲ್ಲಿ ಮತದಾರರನ್ನು ಜಾಗೃತಗೊಳಿಸುವ ಸಲುವಾಗಿ ಜಾಗೃತಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News