ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಪ್ರಕಟಿಸಿದ ಬಿಜೆಪಿ ವಿರುದ್ಧ ಕಾನೂನು ಹೋರಾಟ: ನಟ ಚೇತನ್

Update: 2018-04-15 11:54 GMT

ಕಲಬುರ್ಗಿ, ಎ. 15: ಕೊಡಗು ಜಿಲ್ಲೆ, ಮಡಿಕೇರಿಯ ದಿಡ್ಡಳ್ಳಿ ಆದಿವಾಸಿಗಳ ಪರ ಹೋರಾಟ ಮಾಡಿದ್ದಕ್ಕೆ ಬಿಜೆಪಿ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಪ್ರಕಟಿಸಿದ್ದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಚಿತ್ರನಟ ಚೇತನ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿಡ್ಡಳ್ಳಿಯ ಆದಿವಾಸಿಗಳನ್ನು ನಕ್ಸಲೀಯರೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಆರ್.ಸೀತಾರಾಂ ಅವರು ಬುಡಕಟ್ಟು ಜನರ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಿದ್ದರು.

ಆದಿವಾಸಿಗಳ ಹೋರಾಟ ಹತ್ತಿಕ್ಕುವ ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಜನರೊಂದಿಗೆ ಕೈಜೋಡಿಸಬೇಕಿತ್ತು. ಆದರೆ, ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿರುವುದು ಖಂಡನೀಯ. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರುವೆ ಎಂದರು.

ಅಭಿವೃದ್ಧಿಗೆ ಮತ: ದಲಿತರು, ಕಾರ್ಮಿಕರು ಮತ್ತು ರೈತರ ಪರವಾಗಿ ಮಾತನಾಡುವವರು ಬಿಜೆಪಿ ಕಣ್ಣಲ್ಲಿ ಶತ್ರುಗಳು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಬಂಡವಾಳಶಾಹಿಗಳ ಪರವಿದ್ದು, ಮೂರು ಪಕ್ಷಗಳು ಹಣವಂತರಿಗೆ ಟಿಕೆಟ್ ಕೊಡುತ್ತಿವೆ. ಆದುದರಿಂದ ಈ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿರುವ ಅಭ್ಯರ್ಥಿಗೆ ಮತ ಹಾಕಬೇಕೆಂದು ಚೇತನ್ ಮನವಿ ಮಾಡಿದರು.

ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳ ಮೂಲಕ ನಾನು ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವ ಪಕ್ಷವೂ ಒಳ್ಳೆಯದು, ಕೆಟ್ಟದ್ದು ಎಂದು ಹೇಳುವುದಿಲ್ಲ. ಸಾಮಾಜಿಕ ಕಳಕಳಿ ಇರುವ ಪಕ್ಷ ಮತ್ತು ಕೆಲಸ ಮಾಡಿದವರಿಗೆ ಮತ ಹಾಕಿ ಎಂದರು.

‘ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಸರಕಾರ, ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಕೇಂದ್ರ ಸರಕಾರ ಕೂಡಲೇ ಇದನ್ನು ಪರಾಮರ್ಶಿಸಿ ಮಾನ್ಯತೆ ಕೊಡಬೇಕು. ರಾಜ್ಯ ಸರಕಾರ, ಕೇಂದ್ರದ ಮೇಲೆ ಒತ್ತಡ ಹೇರಬೇಕು’

-ಚೇತನ್ ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News