ಆದಿತ್ಯನಾಥ್ ವಿರುದ್ಧ ಹೇಳಿಕೆಗೆ ದಿನೇಶ್‌ಗುಂಡೂರಾವ್ ವಿಷಾದ

Update: 2018-04-15 12:34 GMT

ಬೆಂಗಳೂರು, ಎ.15: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಾನು ನೀಡಿರುವ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಸಾರ್ವಜನಿಕ ಜೀವನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿತ್ಯನಾಥ್ ವಿರುದ್ಧ ಉದ್ದೇಶಪೂರ್ವಕವಾಗಿ ನಾನು ಇಂತಹ ಹೇಳಿಕೆ ನೀಡಿರಲಿಲ್ಲ. ಉತ್ತರಪ್ರದೇಶ ಸರಕಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಾಗ ಹೇಳಿಕೆ ನೀಡಿದ್ದು ಎಂದರು.

ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಯಾವುದೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ದೂರು ನೀಡಿದ ಸಂತ್ರಸ್ತೆಯ ಕುಟುಂಬದ ವಿರುದ್ಧವೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ಪೊಲೀಸರ ಕ್ರಮ ಎಷ್ಟು ಸರಿ ಎಂದು ದಿನೇಶ್‌ಗುಂಡೂರಾವ್ ಪ್ರಶ್ನಿಸಿದರು.

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಪರಿಸ್ಥಿತಿ ಬಹಳ ಶೋಷನೀಯವಾಗಿದೆ. ಇಂತಹ ಘಟನೆಗಳಿಂದ ಆಕ್ರೋಶಗೊಂಡು ನಾನು ಮಾತನಾಡಿದ್ದೆನೆಯೇ ಹೊರತು, ಉದ್ದೇಶಪೂರ್ವಕವಾಗಿ ಆದಿತ್ಯನಾಥ್ ವಿರುದ್ಧ ಹೇಳಿಕೆಗಳನ್ನು ನೀಡಿಲ್ಲ ಎಂದು ಅವರು ತಿಳಿಸಿದರು.

ಇಲ್ಲಿಗೆ ಬಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಬಗ್ಗೆ ಯೋಗಿ ಆದಿತ್ಯನಾಥ್ ಮಾತನಾಡುತ್ತಾರೆ. ಅವರ ವಿರುದ್ಧವು ಹಲವಾರು ಪ್ರಕರಣಗಳಿವೆ. ನಮ್ಮ ರಾಜ್ಯದ ಸ್ವಾಮೀಜಿಗಳಿಗೆ ಅವರನ್ನು ಹೊಲೀಸಬೇಡಿ, ಆದಿತ್ಯನಾಥ್ ಸ್ವಾಮೀಜಿ ಅಲ್ಲ, ರಾಜಕಾರಣಿ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಉತ್ತರಪ್ರದೇಶ ಸರಕಾರ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಅತ್ಯಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಲಿಲ್ಲ. ಅತ್ಯಾಚಾರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿಲ್ಲ. ಆದಿತ್ಯನಾಥ್ ನೇತೃತ್ವದ ಸರಕಾರದ ಕೆಲಸ ಸರಿಯಾಗಿದೆಯೆ ಎಂಬುದನ್ನು ಅವರು ತಿಳಿಸಲಿ ಎಂದು ದಿನೇಶ್‌ಗುಂಡೂರಾವ್ ಪ್ರಶ್ನಿಸಿದರು.

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸದೆ, ಕೇವಲ ಆದಿತ್ಯನಾಥ್ ಪರ ಮಾತನಾಡಿದರೆ ಹೇಗೇ ? ನನ್ನ ಹೇಳಿಕೆಯನ್ನು ಮುಂದಿಟ್ಟುಕೊಂಡು ಅತ್ಯಾಚಾರ ಪ್ರಕರಣವನ್ನು ಮರೆ ಮಾಚಬೇಡಿ, ಧರ್ಮ, ಜಾತಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡಬೇಡಿ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಬಿಜೆಪಿ ಸಂಸದ ಪ್ರತಾಪ್‌ಸಿಂಹ ಬಗ್ಗೆ ಮಾತನಾಡುವುದಿಲ್ಲ. ಅವರಂತಹ ಕೀಳುಮಟ್ಟದ ರಾಜಕಾರಣಿ ಮತ್ತೊಬ್ಬರಿಲ್ಲ. ಯೋಗಿ ಆದಿತ್ಯನಾಥ್ ಬಗ್ಗೆ ಭಾವೋದ್ವೇಗದಿಂದ ಮಾತನಾಡಿದ್ದೆ. ಆದರೆ, ಪ್ರತಾಪ್‌ಸಿಂಹ ಯೋಚಿಸಿ ಹೀಗೆ ಮಾತನಾಡುವುದು ಸರಿಯಲ್ಲ. ಅವರ ಮನಸ್ಸಿನಲ್ಲಿ ಕೊಳಕು ತುಂಬಿದೆ ಎಂದು ಅವರು ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News