ಕಾಲನಿಯಲ್ಲಿ ಊಟಮಾಡದೆ ದಲಿತರ ಜೊತೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕೇಂದ್ರ ಸಚಿವರ ಭೋಜನ!

Update: 2018-04-15 17:24 GMT

ಹೊಸದಿಲ್ಲಿ, ಎ.15: ಶನಿವಾರದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪಟ್ನಾದಲ್ಲಿ ದಲಿತರ ಜೊತೆ ಪಂಚತಾರಾ ಹೋಟೆಲ್‌ನಲ್ಲಿ ಭೋಜನ ಸವಿಯುವ ಮೂಲಕ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿವಾದ ಹುಟ್ಟುಹಾಕಿದ್ದಾರೆ.

ಎಪ್ರಿಲ್ 14ರಿಂದ ಮೇ 5ರವರೆಗೆ ದಲಿತ ಕಾಲನಿಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅಲ್ಲಿನ ಜನರ ಜೊತೆ ಭೋಜನ ಸೇವಿಸುವಂತೆ ತಮ್ಮ ಸಂಪುಟ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಶಂಕರ್ ಪ್ರಸಾದ್ ಪಟ್ನಾದ ಚೀನಾ ಕೋಟಿ ದಲಿತ ಕಾಲನಿಗೆ ಬಿಹಾರದ ಸಚಿವ ನಂದಕಿಶೋರ್ ಯಾದವ್ ಮತ್ತು ಸ್ಥಳೀಯ ಶಾಸಕ ಸಂಜೀವ್ ಚೌರಾಸಿಯ ಮತ್ತು ನಿತಿನ್ ನವಿನ್ ಜೊತೆ ತೆರಳಿದ್ದರು.

ಭೇಟಿ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ರವಿಶಂಕರ್ ನಂತರ ಆ ಪ್ರದೇಶದಲ್ಲಿ ನಿರ್ಮಿಸಲಾಗುವ ಮರದ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ನಂತರ ಕೇಂದ್ರ ಇಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂಬ ಸಬೂಬು ನೀಡಿ ರವಿಶಂಕರ್ ಅಲ್ಲಿಂದ ಭೋಜನ ಮಾಡದೆ ಆತುರದಲ್ಲಿ ತೆರಳಿದ್ದರು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ಜಯಂತಿಯ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಜನರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಮುಗಿದ ನಂತರ ಕೇಂದ್ರ ಸಚಿವ ಅಲ್ಲಿದ್ದ ದಲಿತರ ಜೊತೆ ಭೋಜನ ಸೇವಿಸಿದರು. ಇದೀಗ ರವಿಶಂಕರ್ ದಲಿತರ ಜೊತೆ ಪಂಚತಾರಾ ಹೋಟೆಲ್‌ನಲ್ಲಿ ಭೋಜನ ಸೇವಿಸುತ್ತಿರುವ ಚಿತ್ರಗಳು ವೈರಲ್ ಆಗಿದ್ದು ವಿಪಕ್ಷಗಳು ಸಚಿವರ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News