ಏಮ್ಸ್ ನಲ್ಲಿ 5 ತಿಂಗಳು ವೈದ್ಯನಂತೆ ನಟಿಸಿದ್ದ ಯುವಕನ ಬಂಧನ

Update: 2018-04-16 07:48 GMT

ಹೊಸದಿಲ್ಲಿ, ಎ.16: ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯಲ್ಲಿ ಕಳೆದ ಐದು ತಿಂಗಳಿನಿಂದ ವೈದ್ಯನಂತೆ ನಟಿಸುತ್ತಿದ್ದ 19 ವರ್ಷದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ಅದ್ನಾನ್ ಖುರ್ರಂ ತನ್ನಲ್ಲಿದ್ದ ನಕಲಿ ಗುರುತು ಪತ್ರದ ಮೂಲಕ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ವೈದ್ಯರ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ  ಸ್ನೇಹ ಸಂಪಾದಿಸಿದ್ದನಲ್ಲದೆ ವೈದ್ಯರಿಗಾಗಿ ಆಯೋಜಿಸಲಾಗುತ್ತಿದ್ದ ಕ್ರೀಡಾಕೂಟ ಹಾಗೂ ಪ್ರತಿಭಟನೆಗಳನ್ನೂ ಭಾಗವಹಿಸುತ್ತಿದ್ದ ಎಂದು ಎಐಐಎಂಎಸ್ ರೆಸಿಡೆಂಟ್ ವೈದ್ಯರ ಸಂಘ ಹೇಳಿದೆ. ಅದೇ ಸಮಯ ಔಷಧಿಗಳ ಬಗ್ಗೆ ಆತನಿಗೆ ಬಹಳಷ್ಟು ಜ್ಞಾನವಿತ್ತಲ್ಲದೆ, ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರ ಮತ್ತು ವೈದ್ಯರ ಹೆಸರುಗಳು ಆತನಿಗೆ ಕಂಠಪಾಠವಾಗಿತ್ತು.

ಶನಿವಾರ ವೈದ್ಯರಿಗಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ನಲ್ಲಿ ಆತ ಭಾಗವಹಿಸಿದ್ದಾಗ ಕೆಲ ವೈದ್ಯರು ಆತನ ಬಗ್ಗೆ ಸಂಶಯಗೊಂಡು ವಿಚಾರಿಸಿದಾಗ ಸಮಾಧಾನಕರ ಉತ್ತರ ನೀಡಲು ವಿಫಲವಾಗಿದ್ದೇ ತಡ ಆತನನ್ನು ಪೊಲೀಸರಿಗೆ ಹಸ್ತಾಂತರಿಸಿದಾಗ ವೈದ್ಯನಲ್ಲವೆಂದು ತಿಳಿದು ಬಂದಿತ್ತು.

ವೈದ್ಯನಂತೆ ನಟಿಸಿದ್ದಾನೆಂಬುದಕ್ಕೆ ಆತ ವಿಭಿನ್ನ ಕಾರಣ ನೀಡಿದ್ದಾನೆಂದು ಹೇಳಲಾಗಿದೆ. ಪರಿಚಯದವರೊಬ್ಬರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತಾಗಲು ಹೀಗೆ ಮಾಡಿದ್ದಾಗಿ ಆತ ಹೇಳಿದ್ದಾನಲ್ಲದೆ ತನಗೆ ವೈದ್ಯರೊಂದಿಗೆ ಸಮಯ ಕಳೆಯುವುದು ಇಷ್ಟವಾದ ವಿಷಯ ಹಾಗೂ ಈ ವೃತ್ತಿಯನ್ನು ತನ್ನದಾಗಿಸಬೇಕೆಂದು ಬಯಸಿದ್ದೆ ಎಂದು ಆತ ವಿಚಾರಣೆ ವೇಳೆ ತಿಳಿಸಿದ್ದಾನೆ.

ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ಬಿಳಿ ಕೋಟು ಹಾಗೂ ಸ್ಥೆಥೊಸ್ಕೋಪ್ ಕುತ್ತಿಗೆಯಲ್ಲಿ ಹಾಕಿಕೊಂಡ ಚಿತ್ರಗಳನ್ನು ಆತ ಅಪ್ಲೋಡ್ ಮಾಡಿದ್ದ. ಹಲವಾರು ರಾಜಕಾರಣಿಗಳ ಜತೆ ಆತ ಕಾಣಿಸಿಕೊಂಡ ಚಿತ್ರಗಳೂ ಇವೆ. ಬಿಹಾರ ಮೂಲದವನಾದ ಈತ ಜಾಮಿಯಾ ನಗರ ಸಮೀಪದ ಬಾಟ್ಲ ಹೌಸ್ ನಿವಾಸಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News