ಸಂತ್ರಸ್ತೆ ಬಾಲಕಿಯ ಕುಟುಂಬಕ್ಕೆ ಭದ್ರತೆ ಒದಗಿಸಿ: ಜಮ್ಮು ಕಾಶ್ಮೀರ ಸರಕಾರಕ್ಕೆ ಸುಪ್ರಿಂ ಸೂಚನೆ

Update: 2018-04-16 16:23 GMT

ಹೊಸದಿಲ್ಲಿ,ಎ.16: ಕಥುವಾದಲ್ಲಿ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಸಂತ್ರಸ್ತೆ ಎಂಟರ ಹರೆಯದ ಬಾಲಕಿಯ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಜಮ್ಮು-ಕಾಶ್ಮೀರ ಸರಕಾರಕ್ಕೆ ಆದೇಶಿಸಿದೆ. ಪ್ರತೀಕಾರ ಮತ್ತು ತನ್ನ ಕುಟುಂಬಕ್ಕೆ ಸುರಕ್ಷತೆಯ ಕೊರತೆಯ ಆತಂಕವನ್ನು ವ್ಯಕ್ತಪಡಿಸಿದ್ದ ಬಾಲಕಿಯ ತಂದೆ ಪ್ರಕರಣದ ವಿಚಾರಣೆಯನ್ನು ಚಂಢೀಗಡಕ್ಕೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿದ್ದರು. ಕುಟುಂಬದ ವಕೀಲರಿಗೂ ರಕ್ಷಣೆಯನ್ನು ಒದಗಿಸುವಂತೆಯೂ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಜಮ್ಮುವಿನಲ್ಲಿಯ ಪರಿಸ್ಥಿತಿಯನ್ನು, ಕಥುವಾದಲ್ಲಿ ವಕೀಲರ ಪ್ರತಿಭಟನೆಯನ್ನು ಮತ್ತು ದೋಷಾರೋಪಣ ಪಟ್ಟಿ ಸಲ್ಲಿಕೆಗೆ ಅಡ್ಡಿಯನ್ನುಂಟು ಮಾಡಿದ್ದನ್ನು ನೋಡಿದರೆ ವಿಚಾರಣೆ ಶಾಂತಿಯುತವಾಗಿ ನಡೆಯುವುದಿಲ್ಲ ಎಂಬ ಭೀತಿ ನಮ್ಮನ್ನು ಕಾಡುತ್ತಿದೆ ಎಂದು ಕುಟುಂಬದ ಪರ ನ್ಯಾಯವಾದಿ ದೀಪಿಕಾ ಎಸ್. ರಾಜಾವತ್ ಅವರು ಹೇಳಿದರು.

ಪ್ರಕರಣದ ಎಂಟು ಆರೋಪಿಗಳ ವಿಚಾರಣೆ ಸೋಮವಾರ ಆರಂಭಗೊಂಡಿದೆ. ಈ ಪೈಕಿ ಮಾಜಿ ಕಂದಾಯ ಅಧಿಕಾರಿ ಸಾಂಜಿರಾಮ ಸೇರಿದಂತೆ ಆರು ಜನರು ಬಾಲಕಿಗೆ ಮತ್ತು ಬರಿಸುವ ಔಷಧ ನೀಡಿ, ಅನ್ನಾಹಾರವಿಲ್ಲದೆ ದೇವಸ್ಥಾನವೊಂದರಲ್ಲಿ ದಿಗ್ಬಂಧನದಲ್ಲಿಟ್ಟು ಆಕೆಯ ಮೆಲೆ ಪದೇಪದೇ ಅತ್ಯಾಚಾರವೆಸಗಿ, ಅಂತಿಮವಾಗಿ ಆಕೆಯ ಹತ್ಯೆಗೈದ ಆರೋಪವನ್ನು ಎದುರಿಸುತ್ತಿದ್ದಾನೆ. ಲಂಚವನ್ನು ಪಡೆದುಕೊಂಡು ಅಪರಾಧವನ್ನು ಮುಚ್ಚಿಹಾಕಲು ಯತ್ನಿಸಿದ್ದ ಆರೋಪವನ್ನು ಇತರ ಇಬ್ಬರು ಆರೋಪಿಗಳಾಗಿರುವ ಪೊಲೀಸ್ ಸಿಬ್ಬಂದಿ ಎದುರಿಸುತ್ತಿದ್ದಾರೆ.

ಇಬ್ಬರು ಸರಕಾರಿ ಅಭಿಯೋಜಕರು

ಪ್ರಕರಣದಲ್ಲಿ ವಾದಿಸಲು ಇಬ್ಬರು ಸರಕಾರಿ ಅಭಿಯೋಜಕರನ್ನು ಸರಕಾರವು ನೇಮಕಗೊಳಿಸಿದ್ದು, ಇವರಿಬ್ಬರೂ ಸಿಕ್ಖರಾಗಿದ್ದಾರೆ. ಹತ್ಯೆಯಾದ ಬಾಲಕಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಎಲ್ಲ ಆರೋಪಿಗಳು ಹಿಂದುಗಳಾಗಿರುವುದರಿಂದ ಪ್ರಕರಣವು ಪ್ರದೇಶದಲ್ಲಿ ತೀವ್ರ ಧ್ರುವೀಕರಣವನ್ನುಂಟು ಮಾಡಿದೆ.

ಜನವರಿಯಲ್ಲಿ ಈ ಹೇಯ ಘಟನೆ ನಡೆದಿದ್ದು, ಇದರ ವಿರುದ್ಧ ಇಡೀ ದೇಶವೇ ಒಂದಾಗಿ ಆಕ್ರೋಶ ವ್ಯಕ್ತಪಡಿಸಿದೆ.

‘‘ನನ್ನ ಮೇಲೂ ಅತ್ಯಾಚಾರ ನಡೆಸಿ,ಕೊಲ್ಲಬಹುದು’’

  ತನ್ನ ಜೀವಕ್ಕೆ ಬೆದರಿಕೆಯಿರುವುದರಿಂದ ರಕ್ಷಣೆ ಕೋರಿ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಬಾಲಕಿಯ ಕುಟುಂಬದ ಪರ ನ್ಯಾಯವಾದಿ ದೀಪಿಕಾ ಎಸ್.ರಾಜಾವತ್ ಅವರು ರವಿವಾರ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ತನ್ನ ಮೇಲೂ ಅತ್ಯಾಚಾರ ನಡೆಸಿ ಕೊಲ್ಲಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದ ದೀಪಿಕಾ,ತಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಶನಿವಾರ ತನಗೆ ದೂರವಾಣಿ ಕರೆ ಮಾಡಿ‘ ನಾವು ನಿನ್ನನ್ನು ಕ್ಷಮಿಸುವುದಿಲ್ಲ’ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಎಂದು ತಿಳಿಸಿದ್ದರು.

ಕಥುವಾದಲ್ಲಿ ಪ್ರಕರಣದ ವಿಚಾರಣೆಗೆ ಪೂರಕ ವಾತಾವರಣವಿರುವಂತೆ ಕಂಡು ಬರುತ್ತಿಲ್ಲ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News