ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕೆ.ಎಸ್.ಈಶ್ವರಪ್ಪಗೆ ಹೈಕೋರ್ಟ್ ನೋಟಿಸ್

Update: 2018-04-16 15:26 GMT

ಬೆಂಗಳೂರು, ಎ.16: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹಾಗೂ ಪುತ್ರ ಕೆ.ಇ ಕಾಂತೇಶ್ ಅವರಿಗೆ ಸೋಮವಾರ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣ ಸಂಬಂಧ ಶಿವಮೊಗ್ಗದ ವಕೀಲ ಬಿ. ವಿನೋದ್ ಸಲ್ಲಿಸಿರುವ ಪುನರಾವಲೋಕನ ಅರ್ಜಿಯನ್ನು ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಎಂ.ಎಸ್. ಶ್ಯಾಮ್ಸುಂದರ್ ವಾದ ಮಂಡಿಸಿ, ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಈಶ್ವರಪ್ಪ ಅವರು ಗಳಿಸಿರುವ ಅಕ್ರಮ ಆಸ್ತಿಯ ವಿವರಗಳನ್ನು ಕಲೆ ಹಾಕಿದ್ದರು. ಅಷ್ಟರಲ್ಲಿ ಲೋಕಾಯುಕ್ತ ನ್ಯಾಯಾಲಯ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಪ್ರಕರಣವನ್ನು ಕೈಬಿಟ್ಟಿದೆ. ಹೀಗಾಗಿ ಪ್ರಕರಣವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಕೆ.ಎಸ್ ಈಶ್ವರಪ್ಪ, ಪುತ್ರ ಕಾಂತೇಶ್, ಪುತ್ರಿ ಶಾಲಿನಿ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಹಾಗೆಯೇ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿದ್ದಪಡಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಒದಗಿಸಿರುವ ದಾಖಲೆಗಳು ಹಾಗೂ ಅರ್ಜಿದಾರರ ಬಳಿ ಇರಬಹುದಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ವಕೀಲ ಬಿ. ವಿನೋದ್ ಅವರು ಕೆ.ಎಸ್ ಈಶ್ವರಪ್ಪ 2006ರಿಂದ 2010ರ ನಡುವೆ ಕೋಟ್ಯಂತರ ರೂ. ವೌಲ್ಯದ ಸ್ಥಿರ ಮತ್ತು ಚರಾಸ್ತಿ ಸಂಪಾದಿಸಿದ್ದಾರೆ. ಈ ಆಸ್ತಿ ಅವರ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಿದೆ. ವಿದೇಶದ ಅಬುದಾಬಿಯಲ್ಲೂ ಆಸ್ತಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಕೋರಿ 2013ರಲ್ಲಿ, ಶಿವಮೊಗ್ಗದ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆದರೆ ಲೋಕಾಯುಕ್ತ ಪೊಲೀಸರು ಶೇಕಡವಾರು ತನಿಖೆ ಪೂರ್ಣಗೊಳಿಸಿದ್ದ ಸಂದರ್ಭದಲ್ಲಿ ಸರಕಾರದ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತ ನ್ಯಾಯಾಲಯ ದೂರು ವಜಾ ಮಾಡಿತ್ತು.

ಲೋಕಾಯುಕ್ತ ನ್ಯಾಯಾಲಯ ದೂರು ವಜಾ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರರ ವಾದ ಮನ್ನಿಸಿದ ನ್ಯಾಯಾಲಯ ಪ್ರಕರಣದ ಮರು ತನಿಖೆಗೆ ಆದೇಶಿಸಿತ್ತು. ಆಗಲೂ ತಾಂತ್ರಿಕ ಕಾರಣವನ್ನು ಮುಂದಿಟ್ಟುಕೊಂಡು ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದ ಈಶ್ವರಪ್ಪ, ಲೋಕಾಯುಕ್ತ ನ್ಯಾಯಾಲಯ ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡಿಲ್ಲ ಎಂದು ಆಕ್ಷೇಪಿಸಿದ್ದರು. 

ಈ ವೇಳೆ ಹೈಕೋರ್ಟ್ ದೂರುದಾರರ ವೈಯಕ್ತಿಕ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸುವಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಹೈಕೋರ್ಟ್ ನಿರ್ದೇಶನದಂತೆ ಲೋಕಾಯುಕ್ತ ನ್ಯಾಯಾಧೀಶ ಭೀಮಾನಾಯ್ಕ ಅವರು ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡರೂ, ಸೂಕ್ತ ದಾಖಲೆಗಳಿಲ್ಲದ ಕಾರಣ ನೀಡಿ ವಿನೋದ್ ಅವರ ದೂರನ್ನು ವಜಾಗೊಳಿಸಿದ್ದರು. ಇದೀಗ ಲೋಕಾಯುಕ್ತ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News