ರೈಲು ಢಿಕ್ಕಿಯಾಗಿ ನಾಲ್ಕು ಆನೆಗಳ ಸಾವು

Update: 2018-04-16 15:43 GMT

ಭುವನೇಶ್ವರ್, ಎ.16: ಒಡಿಶಾದ ಜರ್ಸುಗುಡ ಜಿಲ್ಲೆಯಲ್ಲಿರುವ ಆನೆ ವಲಯದಲ್ಲಿ ಆನೆಗಳ ಹಿಂಡಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ಆನೆಗಳು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಭವಿಸಿದೆ.

ಬಗ್ದಿಹಿ ಅರಣ್ಯ ವಲಯದಲ್ಲಿ ತೆಲದಿಹಿ ಸಮೀಪವಿರುವ ಮಾನವರಹಿತ ರೈಲ್ವೇ ಕ್ರಾಸಿಂಗ್‌ನಲ್ಲಿ ಆನೆಗಳ ಹಿಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗುತ್ತಿದ್ದ ವೇಳೆ ವೇಗವಾಗಿ ಆಗಮಿಸಿದ ಹೌರಾ-ಮುಂಬೈ ಮೇಲ್ ರೈಲು ಆನೆಗಳ ಹಿಂಡಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಆಘಾತಕ್ಕೆ ನಾಲ್ಕು ಆನೆಗಳು ಸ್ಥಳದಲ್ಲೇ ಅಸುನೀಗಿವೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಸುಶಾಂತ್ ಕುಮಾರ್ ತಿಳಿಸಿದ್ದಾರೆ. ಹಳಿಗಳ ಮೇಲೆ ಬಿದ್ದಿದ್ದ ಆನೆಗಳ ಮೃತದೇಹವನ್ನು ತೆರವುಗೊಳಿಸಲು ಮೂರು ಕ್ರೇನ್‌ಗಳನ್ನು ಕರೆಸಲಾಗಿತ್ತು. ಘಟನೆಯ ಪರಿಣಾಮವಾಗಿ ಈ ಮಾರ್ಗವಾಗಿ ತೆರಳುವ ಬೊಕರೊ-ಅಲೆಪ್ಪಿ ಎಕ್ಸ್‌ಪ್ರೆಸ್ ಹಾಗೂ ತಪಸ್ವಿನಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಜರ್ಸುಗುಡ ರೈಲ್ವೇ ನಿಲ್ದಾಣದಲ್ಲಿ ತಡೆಯಲಾಯಿತು. ರಾಜ್ಯದಲ್ಲಿ ರೈಲು ಢಿಕ್ಕಿ ಹೊಡೆದು ಆನೆಗಳು ಸಾಯುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ವನ್ಯಜೀವಿ ಹೋರಾಟಗಾರರು ಅತಂಕ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ಗಂಜಮ್ ಜಿಲ್ಲೆಯಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದ ಪರಿಣಾಮ ಆರು ಆನೆಗಳು ಸಾವನ್ನಪ್ಪಿದ್ದವು. ಕಳೆದ ಎಂಟು ವರ್ಷಗಳಲ್ಲಿ ರೈಲು ಢಿಕ್ಕಿ ಹೊಡೆದು 22 ಆನೆಗಳು ಸಾವನ್ನಪ್ಪಿವೆ ಎಂದು ಸರಕಾರಿ ಕಡತಗಳು ತಿಳಿಸುತ್ತವೆ ಎಂದು ವನ್ಯಜೀವಿ ಹೋರಾಟಗಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News