ಸಮಸ್ಯೆಗಳಿಗೆ ಸ್ಪಂದಿಸುವ ಸೂಕ್ತ ನಾಯಕನನ್ನು ಆಯ್ಕೆ ಮಾಡಿ: ಚಂದ್ರಶೇಖರ ಪಾಟೀಲ್

Update: 2018-04-16 16:43 GMT

ಬೆಂಗಳೂರು, ಎ.16: ಪ್ರಜಾಪ್ರಭುತ್ವದಲ್ಲಿ ಸರಿಯಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇದು ಸಕಾಲ. ಹೀಗಾಗಿ, ಮತದಾನ ಮಾಡುವಾಗ ಎಚ್ಚರಿಕೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೂಕ್ತ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕನ್ನಡ-ಕನ್ನಡಿಗ ಕರ್ನಾಟಕ ಜಾಗೃತಿ ಸಮಿತಿ ಆಯೋಜಿಸಿದ್ದ, ‘ಕನ್ನಡ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಸಬೇಕಾದರೆ ನಮ್ಮ ಅತ್ಯಮೂಲ್ಯ ಮತವನ್ನು ಚಲಾವಣೆ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನನ್ನು ಆಯ್ಕೆ ಮಾಡಬೇಕಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದ್ದಾರೆ. ಅವರ ಆಶಯದಂತೆ, ನಾವೆಲ್ಲರೂ ಸಂಘಟಿತರಾಗಿ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬೇಕು ಎಂದು ಅವರು, ನಮ್ಮ ಕೆಲಸ ಏನಿದ್ದರೂ ಬಿಡುವು ಮಾಡಿಕೊಂಡು, ಮತಗಟ್ಟೆಗೆ ತೆರಳಿ, ಯಾವ ಪಕ್ಷಕ್ಕೆ ಮತ ಚಲಾಯಿಸುತ್ತಿರೋ ಆ ಪಕ್ಷಕ್ಕೆ ಜನರ ಬಗ್ಗೆ ಇರುವ ನಿಲುವನ್ನು ಸ್ಪಷ್ಟಪಡಿಸಿಕೊಂಡು ಮತದಾನ ಮಾಡಿ ಎಂದು ಕರೆ ನೀಡಿದರು.

ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಿಮ್ಮ ಮನೆ ಬಾಗಿಲಿಗೆ ಯಾವುದೇ ಪಕ್ಷದ ನಾಯಕರು ಮತಕೇಳಲು ಬಂದಾಗ ನಾಡು, ನುಡಿ, ಭಾಷೆ, ಸಂಸ್ಕ್ರತಿ, ಉಳಿವಿಗಾಗಿ ಶ್ರಮಿಸುವ ಪಕ್ಷವನ್ನು ಸ್ಪಷ್ಟಪಡಿಸಿಕೊಳ್ಳಿ. ಅಭ್ಯರ್ಥಿಗಳನ್ನು ಪ್ರಶ್ನಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ, ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿನ ಸೌಲಭ್ಯಗಳನ್ನು ಪಡೆದು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುತ್ತಿಲ್ಲ. ಖಾಸಗಿ ಕಚೇರಿಗಳು, ವಾಣಿಜ್ಯ ವ್ಯವಹಾರ ಸಂಸ್ಥೆಗಳು, ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕೆ ಪೂರಕವಾಗಿ ಸ್ಪಂದಿಸುವ ಪಕ್ಷಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷಾ ಬಳಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸರಕಾರಿ ಶಾಲಾ ಸಬಲೀಕರಣ ಸಮಿತಿ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು. ಇಂಜಿನಿಯರ್, ಮೆಡಿಕಲ್, ಡಿಪ್ಲೊಮಾದಂತಹ ಉನ್ನತ ಶಿಕ್ಷಣದಲ್ಲಿ ಎರಡು ಸೆಮಿಸ್ಟರ್‌ಗಳಲ್ಲಿ ಕನ್ನಡವನ್ನು ಕೇವಲ ಅಂಕಗಳಿಗಾಗಿ ಗಣನೆಗೆ ತೆಗೆದುಕೊಳ್ಳದೆ ಒಂದು ಭಾಷೆಯಾಗಿ ಬೋಧಿಸಲು ಕ್ರಮ ಕೈಗೊಳ್ಳಬೇಕೆಂಬುದು ಸೇರಿದಂತೆ 16 ಅಂಶಗಳನ್ನು ಕನ್ನಡ-ಕನ್ನಡಿಗ-ಕರ್ನಾಟಕ ಸಮಿತಿ ಪಟ್ಟಿ ಮಾಡಿದೆ. ಈ ಅಂಶಗಳನ್ನು ಅನುಷ್ಠಾನಕ್ಕೆ ತರುವಂತಹ ಪಕ್ಷಗಳಿಗೆ ಮತ ಚಲಾಯಿಸಿ ಎಂದು ಮನೆ, ಪಾರ್ಕ್, ಬೀದಿ ಬೀದಿಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News