ಕಬ್ಬಾಳಮ್ಮ ದೇವಸ್ಥಾನದ ಸಮಿತಿಗೆ ಡಿ.ಕೆ.ಸುರೇಶ್ ಅಧ್ಯಕ್ಷರಾಗಿ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2018-04-16 16:45 GMT

ಬೆಂಗಳೂರು, ಎ.16: ರಾಮನಗರ ಜಿಲ್ಲೆಯ ಸಾತನೂರು ಹೋಬಳಿಯ ಕಬ್ಬಾಳಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಂಸದ ಡಿ.ಕೆ.ಸುರೇಶ್ ಅವರನ್ನು ನೇಮಕ ಮಾಡಿರುವ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಡಿ.ಕೆ.ಸುರೇಶ್ ಅವರ ನೇಮಕಾತಿ ಪ್ರಶ್ನಿಸಿ ಕಬ್ಬಾಳು ಗ್ರಾಮದ ನಿವಾಸಿ ರವಿ ಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಘವೇಂದ್ರ ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಮತ್ತು ಕಬ್ಬಾಳಮ್ಮ ದೇವಸ್ಥಾನದ ಕಾರ್ಯಕಾರಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಕರಣವೇನು: ಕಬ್ಬಾಳಮ್ಮ ದೇವಸ್ಥಾನವು ಪ್ರವರ್ಗ ಎ ಅಧಿಸೂಚಿತ ದೇವಸ್ಥಾನವಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ನೇಮಕ ಮಾಡಿ ರಾಜ್ಯ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು 2017ರ ಜುಲೈ 28ರಂದು ಆದೇಶ ಮಾಡಿದ್ದಾರೆ. ಸಮಿತಿಯಲ್ಲಿ 9 ಮಂದಿ ಸದಸ್ಯರಿದ್ದು, ಸೆ.20ರಂದು ಅಧ್ಯಕ್ಷರಾಗಿ ಸಂಸದ ಡಿ.ಕೆ.ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕಾನೂನು ಪ್ರಕಾರ ಯಾವುದೇ ರಾಜಕೀಯ ಪಕ್ಷದ ಸದಸ್ಯರನ್ನು ದೇವಸ್ಥಾನ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತಿಲ್ಲ. ಡಿ.ಕೆ.ಸುರೇಶ್ ಅವರು ಸಂಸದರಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ವೇಳೆ ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಉಪಸ್ಥಿತರಿರಲಿಲ್ಲ. ಸಮಿತಿ ಸಭೆ ಕರೆಯುವ ಸಂಬಂಧ ಮುಂಚಿತವಾಗಿ ಸದಸ್ಯರಿಗೆ ನೋಟಿಸ್ ಸಹ ನೀಡಿಲ್ಲ. ಸಮಿತಿ ರಚನೆ ಮತ್ತು ಅಧ್ಯಕ್ಷರನ್ನಾಗಿ ಡಿ.ಕೆ.ಸುರೇಶ್ ಅವರನ್ನು ಆಯ್ಕೆಯಲ್ಲಿ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತಿಗಳ್ತ ಅಧಿನಿಯಮಗಳು-2002ರ ನಿಯಮಗಳನ್ನು ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ದೇವಸ್ಥಾನ ಸಮಿತಿ ರಚನೆ ಮಾಡಿದ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಸಮಿತಿ ಅಧ್ಯಕ್ಷಕರನ್ನಾಗಿ ನೇಮಕ ಮಾಡಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News