ರಾಜ್ಯದಲ್ಲಿ ಬಾಲ ನ್ಯಾಯ ಕಾಯ್ದೆ ಅನುಷ್ಠಾನ ವಿಚಾರ: ವಕೀಲ ಚಂದ್ರಕಾಂತ್ ಅರಿಗ ಅಮಿಕಸ್ ಕ್ಯೂರಿಯಾಗಿ ನೇಮಕ

Update: 2018-04-16 16:46 GMT

ಬೆಂಗಳೂರು, ಎ.16: ರಾಜ್ಯದಲ್ಲಿ ಬಾಲ ನ್ಯಾಯ(ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸೂಕ್ತ ಸಲಹೆ ಹಾಗೂ ಮಾಹಿತಿಯನ್ನು ಒದಗಿಸಲು ವಕೀಲ ಚಂದ್ರಕಾಂತ್ ಅರಿಗ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ (ಕೊರ್ಟ್ ಸಹಾಯಕ) ನೇಮಿಸಲಾಗಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸ್ವಯಂಪ್ರೇರಿತ ಪಿಐಎಲ್ ಅನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ವಕೀಲ ಚಂದ್ರಕಾಂತ್ ಅರಿಗ ಅವರನ್ನು ಕೋರ್ಟ್ ಸಹಾಯಕರನ್ನಾಗಿ ನೇಮಿಸಿತು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಚಂದ್ರಕಾಂತ್ ಅರಿಗ ಅವರಿಗೆ ಒದಗಿಸುವಂತೆ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿತು.

ಪ್ರಕರಣವೇನು: ಕಳೆದ ಮಾ.22ರಂದು ಪ್ರಕರಣವೊಂದರ ತೀರ್ಪು ನೀಡುವ ವೇಳೆ ಸುಪ್ರೀಂಕೋರ್ಟ್, ದೇಶದಲ್ಲಿ ಬಾಲ ನ್ಯಾಯ(ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯ್ದೆ 2015 ಅನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು, ರಾಜ್ಯ ಬಾಲ ನ್ಯಾಯಮಂಡಳಿ, ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಶೇಷ ಮಕ್ಕಳ ಪೊಲೀಸ್ ಘಟಕಗಳು, ಮಕ್ಕಳ ಕ್ಷೇಮಾಭಿವೃದ್ಧಿ ಪೊಲೀಸ್ ಅಧಿಕಾರಿಗಳಿಗೆ ಬಾಲ ನ್ಯಾಯ ಕಾಯ್ದೆಯ ಗಂಭೀರತೆಯ ಕುರಿತು ಅರಿವು ಮೂಡಿಸುವ ಜೊತೆಗೆ ಉತ್ತಮ ತರಬೇತಿ ನೀಡುವ ಅಗತ್ಯವಿದೆ. ಈ ದಿಸೆಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ಆಯೋಗ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕ್ರಮಕ್ಕೆ ಮುಂದಾಗಬೇಕು ಎಂದು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News