ಕಳವು ಪ್ರಕರಣ: ಆರೋಪಿ ಬಂಧನ

Update: 2018-04-17 12:58 GMT

ಬೆಂಗಳೂರು, ಎ.17: ಕಳವು ಪ್ರಕರಣವೊಂದರ ಸಂಬಂಧ ಯುವಕನೊಬ್ಬನನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಆತನ ಬಳಿಯಿದ್ದ 9 ಚಿನ್ನದ ಸರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಕಲ್ಕೆರೆಯ ಎನ್‌ಆರ್‌ಐ ಲೇಔಟ್‌ನ ಸುಹೆಲ್ ಪಾಷಾ(23) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ರಾಮಮೂರ್ತಿ ನಗರ, ನಂದಗುಡಿ, ಹೆಣ್ಣೂರು, ಬಾಣಸವಾಡಿ ಹಾಗೂ ಮೈಸೂರಿನ ಎನ್‌ಆರ್ ನಗರಗಳಲ್ಲಿ ಸರಗಳ್ಳತನ, ಮೊಬೈಲ್ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ. ಅಲ್ಲಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ರಾಮಮೂರ್ತಿನಗರದಲ್ಲಿ ಆಟೊ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಆಟೊ ಓಡಿಸುವುದರಲ್ಲಿ ಹೆಚ್ಚಿನ ಹಣಗಳಿಸಲು ಸಾಧ್ಯವಾಗದೆ ಸಹಚರ ಇಮ್ರಾನ್ ಜೊತೆ ಸೇರಿ ಮತ್ತೆ ಸರಗಳ್ಳತನ ಕೃತ್ಯಕ್ಕಿಳಿದಿದ್ದ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬೈಕ್‌ನಲ್ಲಿ ಸುತ್ತಾಡುತ್ತ ಸರಗಳವು ಮಾಡುತ್ತಿದ್ದ ಎಂದು ಡಿಸಿಪಿ ಶರಣಪ್ಪ ಹೇಳಿದರು.

ಜಯನಗರ ಉಪವಿಭಾಗದಲ್ಲಿ ನಡೆಯುತ್ತಿದ್ದ ಸರಗಳವು ಕೃತ್ಯಗಳನ್ನು ಪತ್ತೆ ಹಚ್ಚಲು ರಚಿಸಲಾಗಿದ್ದ ಎಸಿಪಿ ಎಸ್.ಶ್ರೀನಿವಾಸ್ ನೇತೃತ್ವದ ಜೆಪಿ ನಗರ ಇನ್ಸ್‌ಪೆಕ್ಟರ್ ಹಿತೇಂದ್ರ ಅವರನ್ನೊಳಗೊಂಡ ವಿಶೇಷ ತಂಡವು ಜೆಪಿ ನಗರದ ವಿವಿಟಿ ಕಾಲೇಜ್ ಬಳಿ ನಡೆದಿದ್ದ ಮಹಿಳೆಯ ಸರಗಳ್ಳತನದ ಜಾಡು ಹಿಡಿದು ಸ್ಥಳದಲ್ಲಿ ದೊರೆತ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನಾಧರಿಸಿ ಸುಹೆಲ್‌ನನ್ನು ಬಂಧಿಸಿದ್ದಾರೆ.

ಆತನ ಸಹಚರ ಇಮ್ರಾನ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದು, ಈತನೊಂದಿಗೆ ಮೂರು ಆರೋಪಿಗಳು ಭಾಗಿಯಾಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ. ಆರೋಪಿ ಸುಹೆಲ್ ಬಂಧನದಿಂದ ಜೆಪಿನಗರ, ಬನಶಂಕರಿ ತಲಾ 2, ಜಯನಗರ, ಕೆಎಸ್ ಲೇಔಟ್, ಗಿರಿನಗರ ಠಾಣೆಯ ತಲಾ 1 ಸೇರಿದಂತೆ 7 ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News