ಪ್ರಧಾನಿ ಮೋದಿಯಿಂದಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೊಲೆಯಾಗಲಿದೆ: ಪ್ರಮೋದ್ ಮುತಾಲಿಕ್ ಆರೋಪ

Update: 2018-04-17 14:20 GMT

ಬೆಂಗಳೂರು, ಎ.17: ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ದಾಹಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೊಲೆಯೂ ಆಗಲಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಶ್ರೀರಾಮ ಸೇನಾವತಿಯಿಂದ ಕೇಂದ್ರ ಸರಕಾರಕ್ಕೆ ಹಿಂದೂಗಳ ಬೇಡಿಕೆ ಬಗ್ಗೆ ಒತ್ತಾಯಿಸಲು ಮತ್ತು ಹಿಂದೂ ಸಂಘಟನೆಗಳ ಮುಖಂಡ ಪ್ರವೀಣ್‌ಬಾಯ್ ತೊಗಾಡಿಯ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆನ್ನುವ ಹಿಂದೂ ಮುಖಂಡರನ್ನು ವ್ಯವಸ್ಥಿತವಾಗಿ ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಗಿಸಲು ಮುಂದಾಗಿದ್ದಾರೆ. ಆದರೆ ಮುಂದೆ, ಮೋದಿಯ ಅಧಿಕಾರ ದಾಹಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೊಲೆಯೂ ಆಗಲಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಹಿಂದೂ ಸಂಘಟನೆಗಳನ್ನು ಗುತ್ತಿಗೆ ಪಡೆದ ರೀತಿ ಆರೆಸ್ಸೆಸ್ ನಡೆದುಕೊಳ್ಳುತ್ತಿದೆ. ಅಲ್ಲದೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಮನೆಗೆ ಕಳುಹಿಸುವ ಹೊಸ ವ್ಯವಸ್ಥೆ ಹುಟ್ಟು ಹಾಕಲಾಗಿದೆ ಎಂದ ಅವರು, ಬರೋಬ್ಬರಿ 37 ವರ್ಷಗಳಿಂದ ತನ್ನ ಸ್ವಂತ ಉದ್ಯೋಗ, ಕುಟುಂಬಸ್ಥರನ್ನು ಬಿಟ್ಟು, ಹಿಂದೂ ಸಮಾಜದ ಜಾಗೃತಿಗೆ ಶ್ರಮಿಸಿದ ಪ್ರವೀಣ್‌ಬಾಯ್ ತೊಗಾಡಿಯ ಅವರನ್ನು ಕಡೆಗಣಿಸಿ, ಅವರ ಹತ್ಯೆಗೆ ಸಂಚು ರೂಪಿಸಿದ್ದು, ನಾಚಿಕೆಗೇಡು ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೂ, ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಇನ್ನು, ಜನ ಸಾಮಾನ್ಯರಲ್ಲೂ ಹಿಂದೂ ಸಂಘಟನೆಗಳ ಹೋರಾಟವನ್ನು ಅಪಹಾಸ್ಯ ಮಾಡಲಾಗುತ್ತಿದೆ. ಅಲ್ಲದೆ, ಗೋವು ಹತ್ಯೆ ತಡೆಯುವುದು ಇರಲಿ, ಗೋವು ಮಾಂಸ ರಫ್ತು ಸಹ ತಗ್ಗಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ರಾಮಮಂದಿರ ವಿವಾದ ಜೀವಂತವಾಗಿಟ್ಟು, ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರ ಪಡೆಯಲು ಸಂಚು ರೂಪಿಸಿದರೆ, ಇತ್ತ ಕರ್ನಾಟದಲ್ಲಿ ಚಿಕ್ಕಮಗಳೂರಿನ ದತ್ತ ಪೀಠ ವಿವಾದ ಜೀವಂತವಾಗಿಟ್ಟು ಇಲ್ಲಿ ಬಿಜೆಪಿ ಲಾಭ ಪಡೆಯಲು ಮುಂದಾಗಿದೆ. ಆದರೆ, ಅಧಿಕಾರಕ್ಕೆ ಹೋರಾಡುವ ಡೋಂಗಿ ಹಿಂದುತ್ವ ವಾದಿಗಳನ್ನು ನಾವು ದೂರ ಕಳುಹಿಸಬೇಕು ಎಂದರು.

‘ಪ್ರಧಾನಿ ನರೇಂದ್ರ ಮೋದಿ ನೀಚ’
ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್ ಹಿಂದುತ್ವವಾದಿಗಳು ಮಾತನಾಡುತ್ತಿಲ್ಲ. ನಾವು ಮಾತನಾಡಿದರೆ, ನಮ್ಮ ಬಾಯಿ ಮುಚ್ಚಲು ಮುಂದಾಗಿದ್ದಾರೆ. ಮುಂದುವರೆದು ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ. ಮೋದಿ ಅವರಂತಹ ನೀಚ ಪ್ರಧಾನಿ ಮತ್ತೊಬ್ಬ ಇಲ್ಲ.
-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನಾ ಸಂಸ್ಥಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News