ಬೆಂಗಳೂರು: ಪ್ರತ್ಯೇಕ ರಸ್ತೆ ಅಪಘಾತ; ನಾಲ್ವರಿಗೆ ಗಾಯ

Update: 2018-04-17 16:03 GMT

ಬೆಂಗಳೂರು, ಎ.17: ಚಿಕ್ಕಜಾಲ ಬಳಿಯ ಮೇಲ್ಸೇತುವೆ ರಸ್ತೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದು ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಮೇಲ್ಸೇತುವೆ ರಸ್ತೆಯಲ್ಲಿ ರಾತ್ರಿ 10:30ರ ಸುಮಾರಿಗೆ ಬೈಕ್ ಸವಾರರಿಬ್ಬರು ವೇಗವಾಗಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ತಡೆ ಗೋಡೆಗೆ ಢಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹೊಸದಿಲ್ಲಿ ಮೂಲದ ಇಬ್ಬರು ಸಹೋದರರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಲ ಸಮಯದ ಬಳಿಕ ಇದೇ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ಮೇಲ್ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಚಾಲಕ ಮತ್ತು ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಳೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News