ಆಧಾರ್ ದತ್ತಾಂಶ ಸೋರಿಕೆ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ: ಸುಪ್ರೀಂ ಕೋರ್ಟ್ ಆತಂಕ

Update: 2018-04-17 17:25 GMT

ಹೊಸದಿಲ್ಲಿ, ಎ.17: ದೇಶದ ಹೊರಗಡೆ ಲಭ್ಯವಾಗುವ ಆಧಾರ್ ದತ್ತಾಂಶ ಕೂಡ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆತಂಕ ವ್ಯಕ್ತಪಡಿಸಿದೆ.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಅಶೋಕ್ ಭೂಷಣ್ ಅವರೊಂದಿಗಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ದೇಶದ ಚುನಾವಣಾ ಫಲತಾಂಶದ ಮೇಲೆ ಉಂಟಾಗುವ ಪರಿಣಾಮವೇ ವಿದೇಶಗಳಲ್ಲಿ ಆಧಾರ್ ದತ್ತಾಂಶ ಲಭ್ಯತೆಯ ಅಪಾಯ ಎಂದು ಭಾರತ ಹಾಗೂ ಗುಜರಾತ್ ಸರಕಾರದ ಹಿರಿಯ ವಕೀಲ ರಾಕೇಶ್ ದ್ವಿವೇದಿಗೆ ಹೇಳಿದರು.

ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಆಧಾರ್ ದತ್ತಾಂಶವನ್ನು ಬಳಸಿದಲ್ಲಿ ಪ್ರಜಾಪ್ರಭುತ್ವ ಬದುಕುಳಿಯಬಹುದೇ?. ಇದು ನಡೆದಿರುವುದನ್ನು ನಾವು ನೋಡಿದ್ದೇವೆ. ದತ್ತಾಂಶ ರಕ್ಷಣಾ ಕಾನೂನಿನ ಅನುಪಸ್ಥಿತಿಯಲ್ಲಿ ದತ್ತಾಂಶ ರಕ್ಷಿಸಲು ಯಾವ ಸುರಕ್ಷಾ ಕ್ರಮ ಲಭ್ಯವಿದೆ ? ಇದು ರೋಗ ಲಕ್ಷಣವಲ್ಲ. ನಿಜವಾದದು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ರಾಕೇಶ್ ದ್ವಿವೇದಿ ಅವರಿಗೆ ತಿಳಿಸಿದರು.

 ತಂತ್ರಜ್ಞಾನ ಸುಧಾರಣೆಗೊಳ್ಳುತ್ತಿದೆ ಹಾಗೂ ನಾವು ತಂತ್ರಜ್ಞಾನದ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮಿತಿ ಹೊಂದಿದ್ದೇವೆ ಎಂದು ರಾಕೇಶ್ ದ್ವಿವೇದಿ ಪ್ರತಿಪಾದಿಸಿದರು. ಕೇವಲ ಜ್ಞಾನದ ಮಿತಿಯ ಕಾರಣಕ್ಕೆ ನಾವು ವಾಸ್ತವದಿಂದ ದೂರ ಸರಿಯಲು ಸಾಧ್ಯವಿಲ್ಲ. ಯಾಕೆಂದರೆ, ಭವಿಷ್ಯದ ಜನಾಂಗದ ಮೇಲೆ ದುಷ್ಪರಿಣಾಮ ಉಂಟಾಗದ ಹಾಗೆ ಕಾನೂನನ್ನು ರೂಪಿಸಲು ನಾವು ಯೋಚಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದರು.

ಸಂಸ್ಥೆ ಕೇಳುವ ದೃಢೀಕರಣವನ್ನು ನೀಡುವುದರಿಂದ ದತ್ತಾಂಶ ಹಂಚಿಕೆಯಾಗುತ್ತಿದೆ ಎಂದು ದೂರುದಾರರು ಸೃಷ್ಟಿಸಿರುವ ಭೀತಿ ಹಾಗೂ ಫೋಬಿಯಾವನ್ನು ದಯವಿಟ್ಟು ಮನಸ್ಸಿನಿಂದ ತೆಗೆದು ಹಾಕಿ. ಆಧಾರ್ ಅಡಿಯಲ್ಲಿ ಸಂಗ್ರಹಿಸಲಾದ ದತ್ತಾಂಶ ಪರಮಾಣು ಬಾಂಬ್ ಅಲ್ಲ. ಯಾರೊಬ್ಬರಿಗೂ ದತ್ತಾಂಶ ಹಂಚಿಕೆಯಾಗುವ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ ಎಂದು ರಾಕೇಶ್ ದ್ವಿವೇದಿ ಹೇಳಿದರು. ದೃಢೀಕರಣ ವಿಫಲವಾಗಿದೆ ಎಂಬ ಕಾರಣಕ್ಕೆ ಸೌಲಭ್ಯ ನಿರಾಕರಿಸಲಾಗಿದೆ ಎಂದು ಯಾರೊಬ್ಬರೂ ದೂರು ನೀಡಲು ನ್ಯಾಯಾಲಯದ ಮೆಟ್ಟಿಲೇರಿಲ್ಲ ಎಂದು ಅವರು ಹೇಳಿದರು. ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಮೂರ್ತಿ ಚಂದ್ರಚೂಡ್, ಇದರ ಬಗ್ಗೆ ತುಂಬಾ ತತ್ವಜ್ಞಾನಿಗಳಾಗಬೇಡಿ. ಪ್ರತಿಯೊಬ್ಬರೂ ನ್ಯಾಯಾಲಯಕ್ಕೆ ಬರಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News