ದೇಶದ ವಿರುದ್ಧ ತೀರ್ಪು

Update: 2018-04-18 04:15 GMT

ಅತ್ಯಂತ ಆಘಾತಕಾರಿಯಾದ ತೀರ್ಪೊಂದು ವಿಶೇಷ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಿಂದ ಹೊರಬಿದ್ದಿದೆ. ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರಿಗೆ ಇನ್ನೇನು ಶಿಕ್ಷೆಯಾಗಿಯೇ ಬಿಡುತ್ತದೆ ಎಂಬ ದೇಶದ ನಂಬಿಕೆ ಹುಸಿಯಾಗಿದೆ. ಶಂಕಿತ ಉಗ್ರ ಸ್ವಾಮೀ ಅಸೀಮಾನಂದ ಮತ್ತು ಇತರ ನಾಲ್ವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇವರ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಶನ್ ವಿಫಲಗೊಂಡಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಭಯೋತ್ಪಾದನಾ ಪ್ರಕರಣದಲ್ಲಿ ಅಮಾಯಕರು ಬಂಧಿತರಾಗುವುದು, ಹತ್ತಾರು ವರ್ಷಗಳು ಕಳೆದ ಬಳಿಕ ಅವರು ನಿರಪರಾಧಿಗಳಾಗಿ ಬಿಡುಗಡೆಯಾಗುವುದು ಈ ಹಿಂದೆಯೂ ನಡೆದಿದೆ. ಮಕ್ಕಾ ಮತ್ತು ಅಜ್ಮೀರ್ ಸ್ಫೋಟಕ್ಕೆ ಸಂಬಂಧಿಸಿ ಮೊತ್ತ ಮೊದಲು ಪೊಲೀಸರು ಬಂಧಿಸಿದ್ದು ಅಮಾಯಕ ಮುಸ್ಲಿಮರನ್ನೇ ಆಗಿತ್ತು.

ಯಾವುದೇ ಸ್ಫೋಟ ನಡೆದ ಬೆನ್ನಿಗೇ, ತನಿಖೆ ನಡೆಯುವುದಕ್ಕೆ ಮೊದಲೇ ಮಾಧ್ಯಮಗಳು ಅಪರಾಧಿಗಳನ್ನು ಘೋಷಿಸಿ ಬಿಡುವುದು ಆಕಸ್ಮಿಕವೇನೂ ಆಗಿರಲಿಲ್ಲ. ಅದರ ಹಿಂದೆ, ತನಿಖೆಯ ದಾರಿ ತಪ್ಪಿಸುವ ಅಜೆಂಡಾಗಳಿದ್ದವು. ದುಷ್ಕರ್ಮಿಗಳೇ ನಿಂತು ಮಾಧ್ಯಮಗಳ ಸುದ್ದಿಗಳನ್ನು ನಿಯಂತ್ರಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು, ಬೀಸುವ ದೊಣ್ಣೆಯಿಂದ ಪಾರಾಗಲು ತಕ್ಷಣ ಯಾರನ್ನಾದರೂ ವಶಕ್ಕೆ ತೆಗೆದುಕೊಳ್ಳುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ, ತನಿಖೆ ಪ್ರಗತಿಯಲ್ಲಿದೆ ಎಂದು ಬಿಂಬಿಸಲು ಕೈಗೆ ದೊರಕಿದ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ.. ತಮ್ಮ ಟೋಪಿಯನ್ನು ಉಳಿಸಿಕೊಳ್ಳುವುದಕ್ಕೆ ಅಮಾಯಕರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇಂತಹ ಕೃತ್ಯಗಳಿಂದ, ಅಮಾಯಕರು ತಮ್ಮ ಬದುಕನ್ನು ಕಳೆದುಕೊಂಡದ್ದಲ್ಲದೇ, ನಿಜವಾದ ಉಗ್ರರು ಪಾರಾಗುತ್ತಾ ಬಂದರು. ದೇಶದಲ್ಲಿ ಸ್ಫೋಟ ಪ್ರಕರಣ ಒಂದರ ಹಿಂದೆ ಒಂದರಂತೆ ಸಂಭವಿಸಲು, ಪೊಲೀಸರು ನಿಜವಾದ ಅಪರಾಧಿಗಳನ್ನು ಬಂಧಿಸಲು ವಿಫಲವಾದದ್ದೂ ಒಂದು ಕಾರಣ. ಹೇಮಂತ್ ಕರ್ಕರೆ ತಂಡ ಮೊತ್ತ ಮೊದಲಾಗಿ ಮಾಲೇಗಾಂವ್ ಸೇರಿದಂತೆ ದೇಶದೊಳಗಡೆ ಸಂಭವಿಸಿದ ವಿವಿಧ ಸ್ಫೋಟಗಳಲ್ಲಿ ಕೇಸರಿ ಉಗ್ರರ ಭಾಗೀದಾರಿಕೆಯನ್ನು ಕಂಡುಕೊಂಡಿತು.

ಅವರು ಈ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸುತ್ತಾರೆ ಎನ್ನುವಾಗಲೇ ಕರ್ಕರೆ ನೇತೃತ್ವದ ಇಡೀ ತಂಡ ನಿಗೂಢವಾಗಿ ಉಗ್ರರ ದಾಳಿಗೆ ಬಲಿಯಾಯಿತು. ಆದರೆ ಎಟಿಎಸ್ ಅಷ್ಟರಲ್ಲೇ ಮಹತ್ವದ ದಾಖಲೆಗಳನ್ನು ಕಲೆ ಹಾಕಿತ್ತು ಮತ್ತು ಅದು ಸ್ವಾಮಿ ಅಸೀಮಾನಂದ ಮಾತ್ರವಲ್ಲ, ಆರೆಸ್ಸೆಸ್‌ನ ಕೆಲ ನಾಯಕರ ಕೈವಾಡಗಳು ಉಗ್ರ ಚಟುವಟಿಕೆಗಳ ಹಿಂದೆ ಇರುವುದರ ಕುರಿತಂತೆ ಶಂಕೆಯನ್ನು ವ್ಯಕ್ತಪಡಿಸಿತ್ತು. ಅಸೀಮಾನಂದ ತಾನು ಎಸಗಿದ ಕೃತ್ಯಗಳ ಕುರಿತ 9 ಗಂಟೆಗಳ ತಪ್ಪೊಪ್ಪಿಗೆ ಧ್ವನಿ ಮುದ್ರಿಕೆ ಪ್ರಮುಖ ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಷ್ಟೇ ಅಲ್ಲ ಹಲವು ಮಹತ್ವದ ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳು ಅಸೀಮಾನಂದ ಬಳಗ ದೇಶದ ವಿರುದ್ಧ ನಡೆಸಿದ ದಾಳಿಯನ್ನು ಎತ್ತಿ ತೋರಿಸಿತ್ತು. ಆದರೆ ಯಾವಾಗ ಮೋದಿ ನೇತೃತ್ವದ ತಂಡ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂತೋ, ಅಲ್ಲಿಂದ ಎಟಿಎಸ್‌ನ ಕೈಯಿಂದ ತನಿಖೆಯ ಹೊಣೆ ಎನ್‌ಐಎಗೆ ಹಸ್ತಾಂತರವಾಯಿತು. ಬಳಿಕ ತನಿಖೆ ತಿರುವು ಪಡೆಯಿತು. ನ್ಯಾಯಾಲಯಕ್ಕೆ ತಪ್ಪು ಮಾಹಿತಿಗಳನ್ನು ನೀಡಿ, ಆರೋಪಿಗಳನ್ನು ರಕ್ಷಿಸುವುದೇ ಎಎನ್‌ಐ ಉದ್ದೇಶವಾಗಿತ್ತೋ ಎಂದು ಅನುಮಾನಪಡುವಂತೆ ಅದು ಇಡೀ ಪ್ರಕರಣವನ್ನು ನಿಭಾಯಿಸಿತು.

ಸಿಬಿಐಯಿಂದ ಎನ್‌ಐಎಗೆ ತಲುಪಿದ ಹಲವು ಮಹತ್ವದ ಸಾಕ್ಷಗಳು ನ್ಯಾಯಾಲಯಕ್ಕೆ ಹಾಜರಾಗಲೇ ಇಲ್ಲ. ಬಾಂಬ್ ಇದ್ದ ಚೀಲಗಳನ್ನು ರಾಜೇಂದ್ರ ಜೌಧರಿ ಮತ್ತು ತೇಜ್‌ರಾಮ್ ಪರ್ಮರ್ ಮಕ್ಕಾ ಮಸೀದಿಯ ಬಳಿ ಇರಿಸಿದ್ದರು ಎನ್ನುವುದಕ್ಕೆ ಸಾಕ್ಷಗಳಿದ್ದವು. ಪರ್ಮರ್ ಬಂಧನಕ್ಕೊಳಗಾದರೂ ಆತನ ವಿರುದ್ಧ ತನಿಖಾ ಸಂಸ್ಥೆ ದೋಷಾರೋಪ ಪಟ್ಟಿ ಸಲ್ಲಿಸಲಿಲ್ಲ. ಆರೆಸ್ಸೆಸ್ ನಾಯಕ ಇಂದೇಶ್‌ನ ಪಾತ್ರದ ಕುರಿತಂತೆಯೂ ಎಟಿಎಸ್ ಸಂಶಯ ವ್ಯಕ್ತಪಡಿಸಿತ್ತು. ಎನ್‌ಐಎ ಅವರನ್ನು ಕೂಡ ರಕ್ಷಿಸಿತು. ಅವರ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿಲ್ಲ. ಆರೋಪಿಗಳಿಗೂ ಸಂಘಪರಿವಾರಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಗಮನಿಸಿದಾಗ, ಈ ಶಂಕಿತ ಉಗ್ರರನ್ನು ಪಾರು ಮಾಡುವಲ್ಲಿ ಸರಕಾರದ ಪರೋಕ್ಷ ಕೈವಾಡವನ್ನು ಗುರುತಿಸಬಹುದಾಗಿದೆ. ಜೊತೆಗೆ, ಸ್ಫೋಟಕ್ಕೆ ಸಂಬಂಧಿಸಿ ಇಂತಹದೊಂದು ಮಹತ್ವದ ತೀರ್ಪು ನೀಡಿದ ಬಳಿಕ ನ್ಯಾಯಾಧೀಶ ರವೀಂದ್ರ ರೆಡ್ಡಿ ತನ್ನ ಸ್ಥಾನಕ್ಕೆ ರಾಜೀನಾಮೆ ಯಾಕೆ ನೀಡಿದರು ಎನ್ನುವುದೂ ನಿಗೂಢವಾಗಿದೆ. ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಸ್ವಾಮೀ ಅಸೀಮಾನಂದರ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಸಾಕ್ಷಗಳ ಕೊರತೆಯಾಗಿದೆ ಎನ್ನುವುದಕ್ಕಿಂತ, ಆ ಸಾಕ್ಷಗಳ ಕೊರತೆಯನ್ನು ಎನ್‌ಐಎ ತನಿಖಾ ತಂಡವೇ ಸೃಷ್ಟಿಸಿದೆ ಎಂದು ನಾವು ಭಾವಿಸಬೇಕಾಗಿದೆ. ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ, ಶಂಕಿತ ಉಗ್ರರ ವಿರುದ್ಧ ವಾದಿಸುತ್ತಿದ್ದ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಬಹಿರಂಗ ಪಡಿಸಿದ ಸತ್ಯಗಳನ್ನೂ ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ಮಾಲೇಗಾಂವ್ ಸ್ಫೋಟದ ಆರೋಪಿಗಳ ವಿರುದ್ಧ ವಾದಿಸುವಾಗ ಮೃದುವಾಗುವಂತೆ, ಆರೋಪಿಗಳಿಗೆ ಸಹಕಾರಿಯಾಗುವಂತೆ ಎನ್‌ಐಎ ಅಧಿಕಾರಿಗಳು ಒತ್ತಾಯಿಸಿದ್ದರು ಎಂದು ಅವರು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಸದ್ಯ, ಪ್ರಕರಣದಲ್ಲಿ ಸಾಕ್ಷಗಳ ಕೊರತೆಗೆ ಕಾರಣ ಏನು ಎನ್ನುವುದನ್ನು ಸಾಲ್ಯಾನ್ ಅವರ ಹೇಳಿಕೆಗಳ ಹಿನ್ನೆಲೆಯಲ್ಲಿ ನಾವು ಸುಲಭವಾಗಿ ಗ್ರಹಿಸಬಹುದು.

ಎನ್‌ಐಎ ಶಂಕಿತ ಉಗ್ರರನ್ನು ರಕ್ಷಿಸುವ ಮೂಲಕ ಏಕಕಾಲದಲ್ಲಿ ಹಿಂದೂ ಧರ್ಮಕ್ಕೂ, ದೇಶಕ್ಕೂ ಅನ್ಯಾಯವೆಸಗಿದೆ. ಕಥುವಾ ಪ್ರಕರಣ ದೇಶದ ಕುರಿತಂತೆ ಈಗಾಗವೇ ವಿಶ್ವಾದ್ಯಂತ ಪೂರ್ವಾಗ್ರಹಗಳನ್ನು ಬಿತ್ತಿತೊಡಗಿದೆ. ಇದೇಶದ ವಿರುದ್ಧ ಬಾಂಬ್ ಹಾಕಿದ್ದ ಉಗ್ರರು ಸರಕಾರದ ಕುಮ್ಮಕ್ಕಿನಿಂದ ಇದೀಗ ಒಬ್ಬೊಬ್ಬರಾಗಿ ಆರೋಪ ಮುಕ್ತರಾಗುತ್ತಿರುವುದು ಭಾರತದ ಕುರಿತಂತೆ ಇನ್ನಷ್ಟು ಕೆಟ್ಟ ಅಭಿಪ್ರಾಯಗಳನ್ನು ಜಾಗತಿಕ ವಾಗಿ ಹರಡುತ್ತಿದೆ. ಉಗ್ರವಾದದ ಕುರಿತಂತೆ ಭಾರತದ ದ್ವಂದ್ವ ನಿಲುವನ್ನು ಇದು ಎತ್ತಿ ಹಿಡಿದಿದೆ. ಪರೋಕ್ಷವಾಗಿ ಹಿಂದುತ್ವದ ಹೆಸರಿನಲ್ಲಿ ಬೆಳೆಯುತ್ತಿರುವ ಉಗ್ರವಾದಕ್ಕೆ ಗೊಬ್ಬರ ಹಾಕಿದಂತಾಗಿದೆ. ಇದು ದೇಶವನ್ನು ಇನ್ನಷ್ಟು ಅಪಾಯಕ್ಕೆ ತಳ್ಳಲಿದೆ ಮಾತ್ರವಲ್ಲ, ಹಿಂದೂ ಧರ್ಮದ ಕುರಿತಂತೆಯೂ ಜಾಗತಿಕವಾಗಿ ತುಚ್ಛ ಅಭಿಪ್ರಾಯವನ್ನು ಬಿತ್ತಲಿದೆ. ಇನ್ನಷ್ಟು ಬಾಂಬ್‌ಗಳು ಸ್ಫೋಟಿಸುವುದಕ್ಕೆ ಕಾನೂನು ವ್ಯವಸ್ಥೆಯೇ ಕುಮ್ಮಕ್ಕು ಕೊಟ್ಟಂತಾಗಿದೆ. ಒಂದೆಡೆ ಅಭಿವೃದ್ಧಿಯ ಕುರಿತಂತೆ ಮಾತನಾಡುವ ಸರಕಾರ, ಮಗದೊಂದೆಡೆ ಹಿಂಸೆ, ಸ್ಫೋಟಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳನ್ನು, ಕಾರ್ಯಕರ್ತರನ್ನು ರಕ್ಷಿಸುವುದಕ್ಕೆ ಯತ್ನಿಸುತ್ತಿದೆ. ಇಂತಹ ದ್ವಂದ್ವ ನಿಲುವುಗಳು ಈಗಾಗಲೇ ಹದಗೆಟ್ಟ ಭಾರತದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಪಾತಾಳಕ್ಕೆ ತಳ್ಳಲಿದೆ. ಮುಂದೊಂದು ದಿನ ಕೇಸರಿ ಐಸಿಸ್‌ಗಳ ವಿರುದ್ಧವೇ ಭಾರತದ ಸೇನೆ ಹೋರಾಟ ಬೇಕಾದಂತಹ ಸ್ಥಿತಿಯನ್ನು ನಮ್ಮ ನಾಯಕರು ಮತ್ತು ಕಾನೂನು ವ್ಯವಸ್ಥೆ ಜೊತೆಗೂಡಿ ಸೃಷ್ಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News