ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ!

Update: 2018-04-18 04:10 GMT

ಚೆನ್ನೈ, ಎ.18: ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಂಗಳವಾರ ಸಂಜೆ ರಾಜ್ಯಪಾಲರು ಸುದ್ದಿಗೋಷ್ಠಿ ಕರೆದಿದ್ದರು. ಮಧುರೆ ಕಾಮರಾಜ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಯೊಬ್ಬರು, ''ವಿವಿ ಅಧಿಕಾರಿಗಳಿಗೆ ಲೈಂಗಿಕ ಸುಖ ನೀಡಿದರೆ ಶೈಕ್ಷಣಿಕ ಮತ್ತು ಹಣಕಾಸು ನೆರವು ನೀಡುವುದಾಗಿ ಆಮಿಷ ಒಡ್ಡಿದ್ದರು'' ಎಂಬ ಆರೋಪದ ಬಗ್ಗೆ ರಾಜ್ಯಪಾಲರು ಅಭಿಪ್ರಾಯ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯ ಕೊನೆಯಲ್ಲಿ ಲಕ್ಷ್ಮಿ ಸುಬ್ರಹ್ಮಣ್ಯನ್ ಎಂಬ ಪತ್ರಕರ್ತೆ ಒಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸುವ ಬದಲು ರಾಜ್ಯಪಾಲರು, ಆಕೆಯ ಕೆನ್ನೆ ಮೇಲೆ "ಪೋಷಕರ ರೀತಿಯಲ್ಲಿ ಮತ್ತು ಒಪ್ಪಿಗೆ ಇಲ್ಲದೇ" ಮೆದುವಾಗಿ ಹೊಡೆದರು.

"ನಾನು ಹಲವು ಬಾರಿ ಮುಖ ತೊಳೆದುಕೊಂಡೆ. ಈ ಘಟನೆಯಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ" ಎಂದು ಸುಬ್ರಮಣಿಯನ್ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೇ ಸುದ್ದಿ ನಿಯತಕಾಲಿಕವೊಂದಕ್ಕೆ ಘಟನೆ ಬಗ್ಗೆ 630 ಪದಗಳ ಲೇಖನವನ್ನೂ ಬರೆದಿದ್ದಾರೆ. "ನನಗೆ ಪುರೋಹಿತ್, ರಾಜ್ಯಪಾಲರು. ಸರಿಯಾದ ಪ್ರಶ್ನೆ ಕೇಳುವುದು ನನ್ನ ಹೊಣೆಗಾರಿಕೆ. ನಾನು ಉತ್ತರ ಬಯಸುತ್ತೇನೆಯೇ ಹೊರತು ಕೆನ್ನೆ ಮೇಲೆ ಕೈಯಾಡಿಸುವುದನ್ನಲ್ಲ".

"ರಾಜ್ಯಪಾಲರ ವಿರುದ್ಧವೇ ಲೈಂಗಿಕ ದುರ್ನಡತೆ ಆರೋಪ ಕೇಳಿಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗಳ ಸುರಿಮಳೆ ಬಳಿಕ ಈ ಘಟನೆ ನಡೆಯಿತು" ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಪುರೋಹಿತ್ ವಿರುದ್ಧ ಲೈಂಗಿಕ ದುರ್ನಡತೆ ತನಿಖೆ ನಡೆಯುತ್ತಿದೆ ಎಂದು ಸಿಪಿಎಂ ನಾಯಕರೊಬ್ಬರು ಮಾಡಿರುವ ಆರೋಪದ ಬಗ್ಗೆ ಸುಬ್ರಮಣಿಯನ್ ಪ್ರಶ್ನಿಸಿದ್ದರು. ಇದನ್ನು ವಿವೇಚನಾರಹಿತ ಎಂದು ರಾಜ್ಯಪಾಲರು ತಳ್ಳಿಹಾಕಿದರು.

"ಅಪರಿಚಿತರೊಬ್ಬರು ಒಪ್ಪಿಗೆ ಇಲ್ಲದೇ ಅದರಲ್ಲೂ ಮಹಿಳೆಯನ್ನು ಸ್ಪರ್ಶಿಸುವುದು ವೃತ್ತಿಪರವಲ್ಲದ ಹಾಗೂ ಅನಪೇಕ್ಷಿತ ನಡವಳಿಕೆ" ಎಂದು ಪತ್ರಕರ್ತೆ ಹೇಳಿದ್ದಾರೆ.

ಡಿಎಂಕೆ ಸಂಸದೆ ಕನಿಮೋಳಿ ಪತ್ರಕರ್ತೆಯನ್ನು ಬೆಂಬಲಿಸಿದ್ದಾರೆ. "ರಾಜ್ಯಪಾಲರ ನಡವಳಿಕೆಯ ಉದ್ದೇಶದ ಬಗ್ಗೆ ಯಾವ ಸಂಶಯ ಇಲ್ಲದಿದ್ದರೂ, ಸಾರ್ವಜನಿಕ ಹುದ್ದೆಯಲ್ಲಿರುವವರು, ಘನತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳಾ ಪತ್ರಕರ್ತೆಯ ಖಾಸಗಿತನವನ್ನು ಉಲ್ಲಂಘಿಸುವುದು ಘನತೆಯಲ್ಲ ಅಥವಾ ಯಾವ ಮನುಷ್ಯರಿಗೂ ತೋರುವ ಗೌರವವಲ್ಲ" ಎಂದು ಕನಿಮೋಳಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News