ರೈಲು ಪರಸ್ಪರ ಢಿಕ್ಕಿ ಹೊಡೆಯುವುದನ್ನು ತಡೆದ ಪ್ರಯಾಣಿಕರು

Update: 2018-04-18 11:53 GMT

ಕುನ್ನಿಕ್ಕೋಡ್(ಕೇರಳ), ಎ. 18: ಅಪಾಯ ಸೂಚನೆ ಅರಿತ ಪ್ರಯಾಣಿಕರೇ ಸರಪಳಿ ಎಳೆದದ್ದರಿಂದ ಎರಡು ರೈಲುಗಳು ಪರಸ್ಪರ  ಢಿಕ್ಕಿಹೊಡೆಯುವುದು  ತಪ್ಪಿದೆ. ಕೊಲ್ಲಂ-ಚೆಂಗೋಟೆ ರೈಲುಮಾರ್ಗದಲ್ಲಿ ರೈಲುಗಳ ಢಿಕ್ಕಿ ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿದೆ. ಅವನೀಶ್ವರಂ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ಮಧ್ಯಾಹ್ನ 2:10ಕ್ಕೆ ಘಟನೆ ನಡೆದಿದೆ. ಈ ರೈಲು ಮಾರ್ಗದಲ್ಲಿ   2:05ಕ್ಕೆ ಬಂದ ಕೊಲ್ಲಂ-ಪುನಲೂರ್  ಪ್ಯಾಸೆಂಜರ್  ಮತ್ತು ಕೊಲ್ಲಂ ತಾಂಬರಂ ಎಕ್ಸ್ ಪ್ರೆಸ್ ಸಿಗ್ನಲ್‍ಗಾಗಿ ಕಾದು ನಿಂತಿದ್ದವು.

ಒಂದನೆ ಪ್ಲಾಟ್‍ಫಾರ್ಮ್‍ನಲ್ಲಿ ತಾಂಬರಂ ಎಕ್ಸ್‍ಪ್ರೆಸ್  ಪುನಲೂರಿಗೂ ಮತ್ತು ಎರಡನೆ ಪ್ಲಾಟ್‍ಫಾರ್ಮ್‍ನಲ್ಲಿ ನಿಂತಿದ್ದ ಕೊಲ್ಲಂ ಪುನಲೂರ್ ಪ್ಯಾಸೆಂಜರ್ ರೈಲು ಕೊಲ್ಲಂಗೂ ಹೊರಟು ನಿಂತಿದ್ದವು.. ನಿಲ್ದಾಣದಲ್ಲಿ ಎರಡು ರೈಲು ಪಟ್ಟಿಗಳು ಮಾತ್ರ ಇವೆ. ಈ ಸಂದರ್ಭದಲ್ಲಿ ಉಡಮಣ್-ಗುರುವಾಯೂರ್ ಪ್ಯಾಸೆಂಜರ್ ರೈಲು ಎರಡನೆ ಫ್ಲಾಟ್‍ಫಾರ್ಮಿನಲ್ಲಿ ಬರುತ್ತಿತ್ತು. ಲೆವಲ್ ಕ್ರಾಸ್ ದಾಟಿ ಅವನೀಶ್ವರಂ ತಿರುವು ತಿರುಗುವ ವೇಳೆ ಬೋಗಿಯಲ್ಲಿದ್ದ ಪ್ರಯಾಣಿಕರು ನಿಲ್ದಾಣದ ಎರಡು ಪ್ಲಾಟ್‍ಫಾರ್ಮ್‍ಗಳಲ್ಲಿ ಬೇರೆ ರೈಲುಗಳು ನಿಂತಿರು ವುದನ್ನು ಗಮನಿಸಿದ್ದಾರೆ. ಅವರು ಆ ಕೂಡಲೇ ಅಪಾಯದ ಸರಪಳಿ ಎಳೆದು ರೈಲನ್ನು ಮುಂದೆ ಚಲಿಸುವುದನ್ನು ತಡೆದು ನಿಲ್ಲಿಸಿದ್ದಾರೆ.

ನಿಲ್ದಾಣಕ್ಕೆ ಪ್ರವೇಶಿಸುವ ವೇಳೆ ಕೊಲ್ಲಂ- ಪುನಲೂರ್ ಪ್ಯಾಸೆಂಜರ್ ರೈಲು ವೇಗವನ್ನು ಕಡಿಮೆಗೊಳಿಸಿತ್ತು. ಆದ್ದರಿಂದ ಪ್ರಯಾಣಿಕರು ಸರಪಳಿ ಎಳೆದ ಕೂಡಲೇ  ರೈಲನ್ನು ನಿಲ್ಲಿಸಲು ಚಾಲಕನಿಗೆ ಸಾಧ್ಯವಾಯಿತು. ಲೆವೆಲ್ ಕ್ರಾಸ್‍ನಿಂದ  ನಿಲ್ದಾಣದತ್ತ ಇರುವ ಸಿಗ್ನಲ್ ಕೆಟ್ಟದ್ದರಿಂದ ಈ ಅಚಾತುರ್ಯ ನಡೆದಿದೆ ಎಂದು ರೈಲ್ವೆ  ಅಧಿಕಾರಿಗಳು ತಿಳಿಸಿದ್ದಾರೆ.

ಅಂತಿಮವಾಗಿ ತಾಂಬರಂಗೆ ಹೋಗುವ ರೈಲನ್ನು  ಕಳುಹಿಸಿದ ಬಳಿಕ ಗುರುವಾಯೂರ್ ಪ್ಯಾಸೆಂಜರ್‍ಗೆ ಒಂದನೆ ಪ್ಲಾಟ್‍ಫಾರ್ಮ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News