‘ದೌರ್ಜನ್ಯ ತಡೆ ಕಾಯ್ದೆ, ಭಡ್ತಿ ಮೀಸಲಾತಿ ಸಂರಕ್ಷಣೆಗೆ ಕ್ರಮ ವಹಿಸಿ’

Update: 2018-04-18 13:35 GMT

ಬೆಂಗಳೂರು, ಎ. 18: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹಾಗೂ ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ನಿವಾಸಗಳಿಗೆ ಭೇಟಿ ನೀಡಿ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಲಹೆ ಪಡೆದುಕೊಂಡರು.

ಬುಧವಾರ ಇಲ್ಲಿನ ಹಂಪಿನಗರದಲ್ಲಿ ಚಿದಾನಂದಮೂರ್ತಿಯವರನ್ನು ಹಾಗೂ ರಾಜರಾಜೇಶ್ವರಿನಗರದಲ್ಲಿ ಡಾ.ಸಿದ್ದಲಿಂಗಯ್ಯ ಅವರನ್ನು ಖುದ್ದು ಭೇಟಿ ನೀಡಿದ ಅಮಿತ್ ಶಾ, ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಇಬ್ಬರು ಸಾಹಿತಿಗಳ ಸಲಹೆ- ಸೂಚನೆಗಳನ್ನು ಆಲಿಸಿದರು.

ಭಡ್ತಿ ಮೀಸಲು ಪ್ರಸ್ತಾಪ: ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆ ಹಾಗೂ ಎಸ್ಸಿ-ಎಸ್ಟಿ ವರ್ಗದ ನೌಕರರ ಭಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸರಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ, ದಲಿತರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಡಾ.ಸಿದ್ದಲಿಂಗಯ್ಯ, ಅಮಿತ್ ಶಾ ಅವರಿಗೆ ಮನವಿ ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ (ಎಸ್ಸಿ-ಎಸ್ಟಿ) ಭಡ್ತಿ ಮೀಸಲಾತಿ ಸಂಬಂಧದ ಸುಪ್ರೀಂ ಕೋರ್ಟ್ ತೀರ್ಪಿನಿಂದ 20ಸಾವಿರ ದಲಿತ ಅಧಿಕಾರಿಗಳಿಗೆ ಅನ್ಯಾಯವಾಗಲಿದೆ. ಆದುದರಿಂದ ಪರಿಶಿಷ್ಟ ವರ್ಗದ ಹಿತರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದಲಿಂಗಯ್ಯ ಕೋರಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ. ಆದರೆ, ಕೇಂದ್ರ ಯಾವುದೇ ಅನುದಾನ ನೀಡಿಲ್ಲ. ತಮಿಳುನಾಡಿಗೆ ಈಗಾಗಲೇ 100 ಕೋಟಿ ರೂ.ಅನುದಾನ ನೀಡಿದ್ದು, ಅದೇ ರೀತಿಯಲ್ಲಿ ರಾಜ್ಯಕ್ಕೂ ಅನುದಾನ ನೀಡಬೇಕು ಎಂದು ಸಿದ್ದಲಿಂಗಯ್ಯ ಆಗ್ರಹಿಸಿದರು.

ಬ್ಯಾಂಕುಗಳು ಹಾಗೂ ಖಾಸಗಿ ಕ್ಷೇತ್ರದ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೆ, ಬ್ಯಾಂಕುಗಳ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲೆ ನಡೆಸಬೇಕು ಎಂದು ಕೋರಿದ ಅವರು, ದಲಿತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಅಮಿತ್ ಶಾಗೆ, ಕವಿ ಸಿದ್ದಲಿಂಗಯ್ಯ ತನ್ನ ‘ಊರುಕೇರಿ’ ಆತ್ಮಕಥೆಯ ಆಂಗ್ಲ ಹಾಗೂ ಹಿಂದಿ ಅವತರಿಣಿಕೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಗೂ ಅಂಬೇಡ್ಕರ್ ಅವರ ಅಪರೂಪದ ಭಾವಚಿತ್ರವನ್ನು ನೀಡಿ ಇದೇ ವೇಳೆ ಗೌರವಿಸಿದರು.

ಎರಡೂ ಒಂದೇ: ವೀರಶೈವ-ಲಿಂಗಾಯತ ಎರಡೂ ಒಂದೇ. ಹೀಗಾಗಿ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡ, ರಾಜ್ಯ ಸರಕಾರದ ಪ್ರಸ್ತಾವನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಬೇಡಿ ಎಂದು ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಮನವಿ ಮಾಡಿದರು.

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಬ್ರಿಟಿಷರು ಬಿಟ್ಟು ಹೋಗಿರುವ ‘ಇಂಡಿಯಾ’ ಎನ್ನುವ ಪದ ಕೈಬಿಟ್ಟು ‘ಭಾರತ್’ ಎನ್ನುವ ಪದ ಬಳಕೆ ಮಾಡಬೇಕು. ಮಾತೃಭಾಷಾ ಮಾಧ್ಯಮ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.

ಒಬ್ಬ ಹಿಂದೂ ಉತ್ತಮ ಹಿಂದೂವಾಗಿ, ಒಬ್ಬ ಮುಸ್ಲಿಮ್ ಉತ್ತಮ ಮುಸ್ಲಿಮನಾಗಿ ಹಾಗೂ ಒಬ್ಬ ಕ್ರೈಸ್ತ ಉತ್ತಮ ಕ್ರೈಸ್ತನಾಗಿ ಬದುಕಬೇಕು. ಆದರೆ, ಮತಾಂತರ ಸಲ್ಲದು. ಬಿಜೆಪಿ ಮೇಲ್ವರ್ಗದವರ ಪಕ್ಷ ಎಂದು ಗುರುತಿಸಿಕೊಂಡಿದೆ. ಇದು ಬದಲಾಗಬೇಕು. ದಲಿತರನ್ನು ನಿರ್ಲಕ್ಷಿಸದೆ, ಅವರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಚಿಮೂ ಸಲಹೆ ನೀಡಿದರು ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News