ಎಲ್ಲಾ ಕ್ಷೇತ್ರಗಳಲ್ಲೂ ಕೇಂದ್ರ ಸರಕಾರ ವಿಫಲ: ಬಿಜೆಪಿ ಮುಖಂಡ ಯಶ್ ವಂತ್ ಸಿನ್ಹ

Update: 2018-04-18 14:04 GMT

ಹೊಸದಿಲ್ಲಿ, ಎ.18: ಬಿಜೆಪಿ ಮಾರ್ಗದರ್ಶಕ ಮಂಡಳಿಯ ಸದಸ್ಯರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಮೌನಮುರಿಯಬೇಕು ಹಾಗೂ ಪಕ್ಷದ ಸಂಸದರು ಸರಕಾರದ ವೈಫಲ್ಯಗಳ ಬಗ್ಗೆ ಧ್ವನಿಯೆತ್ತಬೇಕು ಎಂದು ಭಿನ್ನಮತೀಯ ಬಿಜೆಪಿ ಮುಖಂಡ ಯಶ್ ವಂತ್ ಸಿನ್ಹ ಆಗ್ರಹಿಸಿದ್ದಾರೆ.

2014ರ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ನಿರ್ಣಾಯಕ ಬಹುಮತವನ್ನು ವ್ಯರ್ಥ ಮಾಡುತ್ತಿದ್ದರೂ ಪಕ್ಷದ ಮುಖಂಡರು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಿದ್ದಾರೆ ಎಂದವರು ಟೀಕಿಸಿದರು. ಪ್ರಧಾನಿ ಮೋದಿಯನ್ನು ತುಘಲಕ್‌ಗೆ ಹೋಲಿಸಿದ ಸಿನ್ಹ, ನೋಟು ರದ್ದತಿ ಎಂಬುದು ಬಹುದೊಡ್ಡ ವೈಫಲ್ಯವಾಗಿದೆ ಎಂದರು. ಹಿಂದುಳಿದ ಸಮುದಾಯದ ಐವರು ಸಂಸದರು ಸರಕಾರದ ವಿರುದ್ಧ ಧ್ವನಿಯೆತ್ತಿದ್ದಾರೆ. ನೀವು(ಸಂಸದರು) ಕೂಡಾ ಧ್ವನಿಯೆತ್ತಲೇಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರಿನ ಜನತೆ ನಿಮ್ಮನ್ನು ಕ್ಷಮಿಸರು .

ಸಂಸದರು ಸರಕಾರದಿಂದ ಉತ್ತರದಾಯಿತ್ವವನ್ನು ಆಗ್ರಹಿಸಬೇಕು. ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿನ್ಹಾ ಹೇಳಿದರು. ಬಿಜೆಪಿಯ ಹಾಲಿ ಮುಖಂಡತ್ವ ಸರಕಾರದ ವಿರುದ್ಧ ಮುಕ್ತವಾಗಿ ಧ್ವನಿ ಎತ್ತುವ ಎಲ್ಲಾ ಅವಕಾಶಗಳನ್ನೂ ನಿರಾಕರಿಸಿದೆ. ಈಗಿನ ಸಂಸದರಲ್ಲಿ ಶೇ.40ರಷ್ಟು ಮಂದಿಗೆ ಮರು ಸ್ಪರ್ಧೆಗೆ ಅವಕಾಶ ದೊರಕದು. ಸರಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿರುವ ಕಾರಣ ಇತರರಿಗೆ ಅವಕಾಶ ದೊರೆತರೂ ಅವರು ಗೆಲ್ಲಲಾರರು ಎಂದರು. ತಾನು ಬಿಜೆಪಿಯನ್ನು ತೊರೆಯುವುದಿಲ್ಲ. ಬೇಕಾದರೆ ಅವರೇ ನನ್ನನ್ನು ಹೊರಗೆಸೆಯಲಿ ಎಂದು ಸಿನ್ಹಾ ಹೇಳಿದರು. ಬಿಜೆಪಿಯ ಹಿರಿಯ ಸದಸ್ಯರನ್ನು ಒಳಗೊಂಡಿರುವ ಮಾರ್ಗದರ್ಶಕ ಮಂಡಳಿ ಇದುವರೆಗೂ ಅಧಿಕೃತವಾಗಿ ಸಭೆ ಸೇರಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News