2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜಾತ್ಯತೀತ,ಪ್ರಜಾಸತ್ತಾತ್ಮಕ ಶಕ್ತಿಗಳ ಒಗ್ಗಟ್ಟಿಗೆ ಸಿಪಿಎಂ ಒಲವು

Update: 2018-04-18 14:20 GMT

ಹೈದರಾಬಾದ್,ಎ.18: ಸಿಪಿಎಂ ಪಕ್ಷದ ಐದು ದಿನಗಳ 22ನೇ ಮಹಾಧಿವೇಶನವು ಬುಧವಾರ ಇಲ್ಲಿ ಆರಂಭಗೊಂಡಿದ್ದು,ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗಟ್ಟಾಗುವಂತೆ ಕರೆ ನೀಡಿದೆ.

ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು,ದೇಶವು ಪರ್ಯಾಯ ನೀತಿಯೊಂದಿಗೆ ಹೊಸದಿಕ್ಕಿನತ್ತ ಸಾಗಬೇಕೆಂಬ ಕನಸನ್ನು ನನಸಾಗಿಸಲು ಹೋರಾಡುತ್ತಿರುವ ಜನರನ್ನು ಬಲಗೊಳಿಸಲು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗಟ್ಟಾಗುವುದು ಅನಿವಾರ್ಯವಾಗಿದೆ ಎಂದರು.

 ಪಕ್ಷದ ಸ್ವತಂತ್ರ ಚಟುವಟಿಕೆಗಳನ್ನು ಬಲಗೊಳಿಸಲು,ಜನರ ಹೋರಾಟಗಳನ್ನು ತೀವ್ರಗೊಳಿಸಲು,ಎಡಶಕ್ತಿಗಳ ಒಗ್ಗಟ್ಟನ್ನು ಸಶಕ್ತಗೊಳಿಸಲು ಹಾಗೂ ಎಡರಂಗ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಒಗ್ಗಟ್ಟನ್ನು ಹೆಚ್ಚಿಸಲು ಈ ಮಹಾಧಿವೇಶನವು ಹೊಸದಿಕ್ಕನ್ನು ನೀಡಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು,ಕೇಂದ್ರದಲ್ಲಿ ಅಧಿಕಾರ ದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ಜನರನ್ನು ಅಭೂತಪೂರ್ವ ಸಂಕಷ್ಟಗಳಿಗೆ ಸಿಲುಕಿಸಿದೆ ಮತ್ತು ಇದೇ ವೇಳೆ ಸಮಾಜದ ಒಗ್ಗಟ್ಟು ಮತ್ತು ಅಖಂಡತೆಗೆ ಬೆದರಿಕೆಯೊಡ್ಡಿದೆ ಎಂದರು.

  ನಮ್ಮ ಸಮಾಜವು ಮಾನವೀಯತೆಯನ್ನು ಕಳೆದುಕೊಂಡಿದೆ ಎನ್ನುವುದಕ್ಕೆ ಕಥುವಾ ಮತ್ತು ಉನ್ನಾವೊ ಅತ್ಯಾಚಾರ ಪ್ರಕರಣಗಳು ಕ್ರೂರ ಸಾಕ್ಷಿಗಳಾಗಿವೆ. ಅತ್ಯಾಚಾರವನ್ನು ಕೋಮು ಧ್ರುವೀಕರಣದ ಅಸ್ತ್ರವನ್ನಾಗಿ ಬಳಸುತ್ತಿರುವುದು ನಾಚಿಕೆಗೇಡಿನ ಕೃತ್ಯವಾಗಿದೆ. ಇದನ್ನು ಪ್ರತಿರೋಧಿಸಬೇಕು ಮತ್ತು ಸೋಲಿಸಬೇಕು ಎಂದ ಅವರು,ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಮಾರಣಾಂತಕ ದಾಳಿಗಳಿಗೆ ಗುರಿಯಾಗಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕೃಷಿ ಬಿಕ್ಕಟ್ಟು,ನೋಟು ನಿಷೇಧ,ಜಿಎಸ್‌ಟಿ ಇತ್ಯಾದಿ ವಿಷಯಗಳ ಕುರಿತೂ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News