170 ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ: ಡಾ.ಜಿ.ಪರಮೇಶ್ವರ್

Update: 2018-04-18 14:31 GMT

ಬೆಂಗಳೂರು, ಎ.18: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದಿರುವ 218 ಅಭ್ಯರ್ಥಿಗಳ ಪೈಕಿ 170 ಮಂದಿಗೆ ಈಗಾಗಲೆ ಬಿ ಫಾರಂ ವಿತರಣೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೂಚನೆಯಂತೆ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮಾಡಲಾಗುತ್ತಿದೆ ಎಂದರು. ನಾಲ್ಕೈದು ಕ್ಷೇತ್ರಗಳನ್ನು ಬಾಕಿ ಇರಿಸಿಕೊಂಡಿದ್ದೇವೆ. ರಾಹುಲ್‌ಗಾಂಧಿ ಪ್ರವಾಸದಲ್ಲಿದ್ದು, ಅವರು ದಿಲ್ಲಿಗೆ ವಾಪಸಾದ ಬಳಿಕ ಆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಟಿಕೆಟ್ ಹಂಚಿಕೆಗೆ ಗೆಲುವೊಂದೆ ಮಾನದಂಡವಾಗಿದ್ದು, ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

ರಾಜ್ಯದಲ್ಲಿ ಮತ್ತೆ ನಮ್ಮ ಸರಕಾರವೇ ಅಧಿಕಾರಕ್ಕೆ ಬರಲಿದೆ. ಸರಕಾರ ಐದು ವರ್ಷಗಳಲ್ಲಿ ಉತ್ತಮ ಯೋಜನೆಗಳನ್ನು ನೀಡಿದೆ. ಯಾವುದೆ ಹಗರಣಗಳಿಲ್ಲದೆ ಆಡಳಿತ ನಡೆಸಿದೆ. ಸಾಮಾಜಿಕ ನ್ಯಾಯ, ಸರ್ವಾಂಗೀಣ ಅಭಿವೃದ್ಧಿಯನ್ನು ಒಟ್ಟಿಗೆ ಕೊಂಡೊಯ್ದಿದ್ದೇವೆ. ನಮ್ಮ ಯೋಜನೆಗಳು ಜನಸಾಮಾನ್ಯರಿಗೆ ತಲುಪಿದ್ದು, ಸಂಪೂರ್ಣ ಯಶಸ್ವಿ ಆಡಳಿತ ನೀಡಿದ್ದೇವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೆ ನಾವು ಪ್ರಥಮ ಸ್ಥಾನದಲ್ಲಿದ್ದೇವೆ. ಉದ್ಯೋಗ ನೀಡುವ ವಿಚಾರದಲ್ಲೂ ಪ್ರಗತಿ ಸಾಧಿಸಿದ್ದೇವೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ನೀರಾವರಿಗೆ ಹೆಚ್ಚು ಅನುದಾನ ನೀಡಿದ್ದೇವೆ. ಈ ಎಲ್ಲ ಮಾನದಂಡಗಳ ಮೂಲಕ ಚುನಾವಣೆಗೆ ಹೋಗುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.

ಮಾಜಿ ಸಚಿವ ಅಂಬರೀಶ್ ಜೊತೆ ನಾನು ಮತ್ತು ಮುಖ್ಯಮಂತ್ರಿ ಮಾತನಾಡಿದ್ದೇವೆ. ಐದು ಕ್ಷೇತ್ರದಲ್ಲಿ ಟಿಕೆಟ್ ಸಿಗದವರು ಪ್ರತಿಭಟನೆ ನಡೆಸಿದ್ದಾರೆ. ಅವರ ಮನವೊಲಿಸುವ ಕೆಲಸ ನಾವು ಮಾಡಿದ್ದೇವೆ. ನಮ್ಮಲ್ಲಿ ಅಂತ ಬಂಡಾಯವೇನಿಲ್ಲ ಎಂದು ಅವರು ತಿಳಿಸಿದರು.

ಮಾಯಕೊಂಡ ಶಾಸಕ ಕೆ.ಶಿವಮೂರ್ತಿಗೆ ಟಿಕೆಟ್ ಕೈ ತಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿರುವ ಕ್ಷೇತ್ರಗಳ ಕುರಿತು ಮರುಪರಿಶೀಲನೆ ಮಾಡುತ್ತಿದ್ದೇವೆ. ಬೇರೆ ಅಭ್ಯರ್ಥಿ ಹಾಕುವ ಕೆಲಸ ಮಾಡಿದ್ದೇವೆ. ಶಿವಮೂರ್ತಿಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿದ್ದೇವೆ ಎಂದರು. ಮಲ್ಲೇಶ್ವರಂನಲ್ಲಿ ಸಚಿವ ಎಂ.ಆರ್.ಸೀತಾರಾಂಗೆ ಟಿಕೆಟ್ ಕೊಟ್ಟಿದ್ದೇವೆ. ಅವರು ಕಾರ್ಯಕರ್ತರ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಪಕ್ಷ ಟಿಕೆಟ್ ಕೊಟ್ಟ ಮೇಲೆ ನಿಂತುಕೊಳ್ಳಬೇಕು. ಇವತ್ತು ಇಲ್ಲ, ನಾಳೆ ಅವರು ತಮ್ಮ ತೀರ್ಮಾನ ತಿಳಿಸುತ್ತಾರೆ. ಅದೇ ರೀತಿ, ಸಚಿವ ಎಚ್.ಎಂ.ರೇವಣ್ಣ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಹಾಕಿರಲಿಲ್ಲ. ಆದರೂ, ಹೈಕಮಾಂಡ್ ಚುನಾವಣೆಯಲ್ಲಿ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಪರಮೇಶ್ವರ್ ತಿಳಿಸಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರಾಜ್ಯ, ಕಂದಾಯ ವಿಭಾಗ ಹಾಗೂ ಜಿಲ್ಲಾವಾರು ಎಂದು ವಿಭಾಗಿಸಿದ್ದೇವೆ. ಕೇಂದ್ರ ಪ್ರಣಾಳಿಕೆ ಸಮಿತಿ ಪರಿಶೀಲನೆ ಬಳಿಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದರು.

ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿಗೆ ಮಡಿಕೇರಿ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಆದರೆ, ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಪರ ವಕಾಲತ್ತು ವಹಿಸಿರುವ ಕಾರಣ ಅವರಿಗೆ ಬಿ ಫಾರಂ ನೀಡಬೇಕೆ, ಬೇಡವೇ ಎಂಬುದರ ಕುರಿತು ಚರ್ಚೆ ನಡೆದಿದೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News