ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸುತ್ತಿರುವುದೇಕೆ: ಮಾತೆ ಮಹಾದೇವಿ ಪ್ರಶ್ನೆ

Update: 2018-04-18 14:40 GMT

ಬೆಂಗಳೂರು, ಎ.18: ಬೌದ್ಧ, ಜೈನ್, ಸಿಖ್ ಧರ್ಮಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸದವರು, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಸವಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಪ್ರಶ್ನಿಸಿದ್ದಾರೆ.

ನಗರದ ಪುರಭವನದಲ್ಲಿ ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾದ ವತಿಯಿಂದ ಆಯೋಜಿಸಿದ್ದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ವಿರೋಧ ವ್ಯಕ್ತಪಡಿಸುತ್ತಿರುವುದು ನ್ಯಾಯಯುತವಲ್ಲ. 30 ವರ್ಷಗಳ ಸತತ ಹೋರಾಟಗಳು ನಡೆಯುತ್ತಿದ್ದರೂ ನಮಗೆ ನ್ಯಾಯ ಸಿಕ್ಕಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಮ್ಮ ಬೇಡಿಕೆ ಈಡೇರಿಸಿದೆ. ಅದಕ್ಕೆ ರಾಜಕೀಯ ಬಣ್ಣ ಬಳಿಯಲು ಮುಂದಾಗಿರುವುದು ಸಲ್ಲದು ಎಂದರು.

ಹಿಂದೂ ಧರ್ಮ ಪ್ರಚಾರಕ ಸೂಲಿಬೆಲೆ ಚಕ್ರವರ್ತಿ ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿ ಯಲ್ಲಿರುವ ಮಠಾಧೀಶರು, ನೇತಾರರಿಗೆ ಉಗ್ರ ಸಂಘಟನೆಗಳಿಂದ ದುಡ್ಡು ಹರಿದು ಬರುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರಿಗೆ ಬಸವ ಧರ್ಮ ಅಥವಾ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಮೊದಲು ಅವರು ಇತಿಹಾಸ ತಿಳಿದುಕೊಳ್ಳಲಿ, ಅನಂತರ ರಾಜಕೀಯ ಪ್ರೇರಿತ ಹೇಳಿಕೆ ನೀಡಲಿ ಎಂದು ಹೇಳಿದರು.

ವೀರಶೈವ-ಲಿಂಗಾಯತ ಧರ್ಮವನ್ನು ವಿಭಜಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವ ಜಯಂತಿಯ ದಿನ ಬಸವ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಿಡಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆ ಸರಿಯಲ್ಲ. ಸಂಸದೆಯಾಗಿ ಈ ರೀತಿಯಾಗಿ ಉದ್ರೇಕಕಾರಿಯಾಗಿ ಮಾತನಾಡಿ ಸಮಾಜಕ್ಕೆ ಎಂತಹ ಸಂದೇಶ ನೀಡುತ್ತಿದ್ದಾರೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಬಸವ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅರ್ಹ ವ್ಯಕ್ತಿ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆದಿಲ್ಲ ಎಂದ ಅವರು, ಅವರು ಮೂಢನಂಬಿಕೆ ವಿರೋಧಿ ಮಸೂದೆ ಜಾರಿ ಮಾಡಿದರು. ಮತ್ತೊಂದು ಕಡೆ ಮಹಿಳಾ ವಿವಿಗೆ ಅಕ್ಕಮಹಾದೇವಿ, ಎಲ್ಲ ಸರಕಾರಿ ಕಾರ್ಯಾಲಯಗಳಲ್ಲಿ ಬಸವಣ್ಣ ಭಾವಚಿತ್ರವಿಡಲು ಆದೇಶ ನೀಡಿದ್ದಾರೆ. ಲಿಂಗಾಯತವು ಹಿಂದೂ ಧರ್ಮದೊಳಗಿನ ಒಂದು ಜಾತಿ, ಮತ, ಪಂಥವಲ್ಲ. ಇದಕ್ಕೆ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತ ಧರ್ಮಗಳಂತೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ಹಲವಾರು ವರ್ಷಗಳಿಂದ ಚಳವಳಿ ನಡೆಯುತ್ತಿದೆ.

ಆದರೆ, ಚಳವಳಿ ಸ್ಪರೂಪ ಇತ್ತೀಚಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಕ್ಕೂ ಮನ್ನಣೆ ನೀಡಬೇಕು ಎಂದು ಹೇಳಿದ್ದಾರೆ. ಅವರು ಧರ್ಮ ಒಡೆಯದೇ, ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವ ಮಂಟಪ ಪ್ರಧಾನ ಕಾರ್ಯದರ್ಶಿ ಬಸವಕುಮಾರ ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷ ಎನ್.ಪುಟ್ಟರುದ್ರ, ವಕೀಲ ಅನಂತ ನಾಯಕ್ ಸೇರಿದಂತೆ ಲವರು ಪಾಲ್ಗೊಂಡಿದ್ದರು.

‘ದೇಶದಲ್ಲಿ ಅಧಿಕಾರ ನಡೆಸುತ್ತಿರುವವರಿಗೆ ಹಾಗೂ ರಾಜಕಾರಣಿಗಳಿಗೆ ಅಭಿವೃದ್ಧಿ ಎಂಬುದು ಅಗತ್ಯವಿಲ್ಲ. ದೇಶ ಏನಾದರೂ ಪರವಾಗಿಲ್ಲ ಎಂಬ ಮನೋಭಾವ ಹೊಂದಿದ್ದು, ದೇಶದ ಬಗ್ಗೆ ಒಂದಿಷ್ಟೂ ಚಿಂತನೆ ಮಾಡುತ್ತಿಲ್ಲ. ಬಸವಣ್ಣ ಅಸಮಾನತೆ ವಿರುದ್ಧ ಹೋರಾಡಿದ. ಅದೇ ರೀತಿ ಲಿಂಗಾಯತರು ಹಾಗೂ ದಲಿತರು ಅಸಮಾನತೆ ವಿರುದ್ಧ ಹೋರಾಡಬೇಕು. ಎಲ್ಲರೂ ಬಸವಣ್ಣನ ತತ್ವಗಳನ್ನು ಅಳವಡಿಸಿಕೊಳ್ಳಬೇಕು’
-ಚೇತನ್, ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News