ಪತ್ನಿಯ ಕೊಲೆ: ಉ.ಪ್ರದೇಶ ಶಾಸಕನ ಜಾಮೀನು ರದ್ದು ಕೋರಿದ ಅರ್ಜಿ ವಜಾ

Update: 2018-04-18 15:00 GMT

ಹೊಸದಿಲ್ಲಿ, ಎ.18: ಪತ್ನಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಉತ್ತರಪ್ರದೇಶ ಶಾಸಕ ಅಮನ್‌ಮಣಿ ತ್ರಿಪಾಠಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.

 2015ರಲ್ಲಿ ತ್ರಿಪಾಠಿ ಮತ್ತವರ ಪತ್ನಿ ಸಾರಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಫಿರೋಝಾಬಾದ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಅಪಘಾತಕ್ಕೆ ಈಡಾಗಿ ಸಾರಾ ಸಿಂಗ್ ಮೃತಪಟ್ಟಿದ್ದರು. ಆದರೆ ತನ್ನ ಮಗಳನ್ನು ತ್ರಿಪಾಠಿಯ ತಂದೆ ಅಮರ್‌ಮಣಿಯ ಸೂಚನೆಯ ಮೇರೆಗೆ ಕೊಲೆ ಮಾಡಲಾಗಿದೆ ಎಂದು ಸಾರಾ ಸಿಂಗ್ ತಾಯಿ ಸೀಮಾ ಸಿಂಗ್ ಆರೋಪಿಸಿದ್ದರು. ಖ್ಯಾತ ಕವಯಿತ್ರಿ ಮಧುಮಿತ ಶುಕ್ಲ ಕೊಲೆ ಪ್ರಕರಣದಲ್ಲಿ ಅಮರ್‌ಮಣಿ ಹಾಗೂ ಆತನ ಪತ್ನಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

  ಮಗಳ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸೀಮಾ ಸಿಂಗ್ ಆಗ್ರಹಿಸಿದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಬಳಿಕ ಸಿಬಿಐ ಅಮನ್‌ಮಣಿ ತ್ರಿಪಾಠಿಯನ್ನು ತನಿಖೆ ನಡೆಸಲು ಕಸ್ಟಡಿಗೆ ಪಡೆದಿತ್ತು. ಈ ಮಧ್ಯೆ, ಕಳೆದ ವರ್ಷದ ಮಾರ್ಚ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ತ್ರಿಪಾಠಿಗೆ ಜಾಮೀನು ಮಂಜೂರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News