ನೋಟು ಅಮಾನ್ಯೀಕರಣದ ಸಮಸ್ಯೆಗೆ ಸಿಗದ ಪರಿಹಾರ: ಎಐಸಿಸಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ

Update: 2018-04-18 16:25 GMT

ಬೆಂಗಳೂರು, ಎ.18: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಬಹುಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿದ ನಂತರ ಸೃಷ್ಟಿಯಾದ ಸಮಸ್ಯೆಗಳಿಗೆ ಈವರೆಗೆ ಪರಿಹಾರ ಸಿಗಲಿಲ್ಲ ಎಂದು ಎಐಸಿಸಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವರು ಸಾರ್ವಜನಿಕರ ಹಣವನ್ನು ಲೂಟಿ ಹೊಡೆದು ವಿದೇಶಕ್ಕೆ ಓಡಿ ಹೋದರು. ಆದರೆ, ಸಾಮಾನ್ಯ ಜನತೆ ಎಟಿಎಂ ಮುಂದೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ದೇಶದಲ್ಲಿರುವ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗಿದೆ. ಯಾವ ಎಟಿಎಂಗಳನ್ನು ನೋಡಿದರೂ ‘ನೋ ಕ್ಯಾಶ್’ ಅನ್ನೋ ಫಲಕ ಸ್ವಾಗತಿಸುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.

ನೋಟುಗಳ ಅಮಾನ್ಯೀಕರಣದ ನಂತರ ನಗದು ರಹಿತ ವ್ಯವಹಾರ ಹೆಚ್ಚಾಗಿಲ್ಲ. ಜನ ಸಾಮಾನ್ಯರು ತಮ್ಮ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ನರೇಂದ್ರ ಮೋದಿಯವರೇ ಜನರಿಗೆ ಸುಳ್ಳು ಹೇಳುವುದು, ಮೋಸ ಮಾಡುವುದು ಹಾಗೂ ದೂರುವುದನ್ನು ಬಿಡಿ ಎಂದು ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದರು.

ಕೇಂದ್ರದಲ್ಲಿ ಸೂಟು ಬೂಟಿನ ಸರಕಾರ ಆಡಳಿತ ನಡೆಸುತ್ತಿದೆ. ಬ್ಯಾಂಕುಗಳ ವಂಚನೆಯಿಂದಾಗಿ ದೇಶಕ್ಕೆ 61 ಸಾವಿರ ಕೋಟಿ ರೂ.ಗಳ ನಷ್ಟವಾಗಿದೆ. ಆದರೆ, ಇದರ ಬಗ್ಗೆ ಪ್ರಧಾನಿ ನರೇಂದ್ರಮೋದಿ ಮಾತನಾಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News