ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ: ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ

Update: 2018-04-18 16:30 GMT

ಬೆಂಗಳೂರು, ಎ.18: ನಮ್ಮ ಜನಸಾಮಾನ್ಯರು ಬಸವ ಬಸವಾ ಎಂದು ಸದಾ ಬಸವಣ್ಣನನ್ನು ಸ್ಮರಿಸುತ್ತಾರೆ. ಉತ್ತುವಾಗ, ಬಿತ್ತುವಾಗ, ಬೆಳೆಯುವಾಗ, ಮಲಗುವಾಗ ಬಸವಣ್ಣನನ್ನು ನೆನೆಯುತ್ತಾರೆ. ಬಸವಣ್ಣ ಕನ್ನಡ ನಾಡಿಗೆ ಮತ್ತು ಭಾಷೆಗೆ ಮೆರುಗನ್ನು ಕೊಟ್ಟ ಸಾಂಸ್ಕೃತಿಕ ನಾಯಕ ಎಂದು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಬಣ್ಣಿಸಿದ್ದಾರೆ.

ವಚನಜ್ಯೋತಿ ಬಳಗ ಜಯನಗರದಲ್ಲಿ ಆಯೋಜಿಸಿದ್ದ ಬಸವ ಉತ್ಸವದಲ್ಲಿ ಮಾತನಾಡಿದ ಅವರು, ಬಸವಣ್ಣನನ್ನು ನೆನೆದರೆ ಅದು ಕನ್ನಡವನ್ನು ನೆನೆದಂತೆ, ವಚನ ಸಾಹಿತ್ಯ ಬೇರೆಯಲ್ಲ, ಕನ್ನಡ ಸಾಹಿತ್ಯ ಬೇರೆಯಲ್ಲ. ವಚನದಿಂದ ಕನ್ನಡವನ್ನು ಸಮೃದ್ಧಗೊಳಿಸಿದ ಬಸವಣ್ಣನನ್ನು ನಾವು ಸದಾ ನೆನೆಯಬೇಕು. ಆ ಕೆಲಸವನ್ನು ಪ್ರತಿವರ್ಷವೂ ರಾಜಧಾನಿಯಲ್ಲಿ ಮಾಡುತ್ತಾ ಬಂದಿರುವ ವಚನಜ್ಯೋತಿ ಬಳಗದಿಂದ ಬೆಂಗಳೂರಿನಲ್ಲಿ ಸಾವಿರಾರು ಜನ ಬಸವಣ್ಣನನ್ನು ನೋಡುತ್ತಾರೆ, ನಲಿಯುತ್ತಾರೆ, ನಮಸ್ಕರಿಸುತ್ತಾರೆ, ಇದೇ ಈ ಬಸವ ಉತ್ಸವದ ವಿಶೇಷ ಎಂದು ಪ್ರಶಂಸಿಸಿದರು.

ನಾಡೋಜ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಅರ್ಪಣಾ ಭಾವಕ್ಕೆ ಹೆಸರಾದವನು ಬಸವಣ್ಣ , ತಾನೊಬ್ಬನೇ ಸಾಹಿತ್ಯ ಬರೆಯದೆ, ತಾನೊಬ್ಬನೇ ವಿಚಾರಶೀಲನಾಗದೆ, ಎಲ್ಲರನ್ನೂ ವಚನಕಾರರನ್ನಾಗಿ ಮಾಡಿ ವಿಚಾರಶೀಲತ್ವವನ್ನು ತುಂಬಿದ ಬಸವ ಸಂದೇಶವನ್ನು ಸಿಲಿಕಾನ್ ಸಿಟಿಗೆ ಬಿತ್ತಬೇಕಾಗಿದೆ. ಹೊಸ ಹೊಸ ಮಾರುಕಟ್ಟೆಯ ತಂತ್ರಗಳಿಗೆ ಬೆರಗಾಗಿರುವ ಯುವಜನತೆಗೆ ಬಸವ ಸಂದೇಶವನ್ನು ತಲುಪಿಸಿದಲ್ಲಿ ಅವರ ಬಾಳು ಬಂಗಾರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗ ಕಳೆದ ಇಪ್ಪತ್ತು ವರ್ಷಗಳಿಂದ ವಚನ ಸಂದೇಶವನ್ನು ಎಳೆಯರಿಗೆ ಮುಟ್ಟಿಸುತ್ತಿದೆಯಲ್ಲದೆ ಬಸವ ಉತ್ಸವದಂತಹ ಸಾರ್ಥಕ ಕಾರ್ಯಕ್ರಮ ನಡೆಸುತ್ತಿದೆ ಎಂದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಮಾತನಾಡಿ, ನಡೆಯೊಳಗೆ ನುಡಿಯ ಪೂರೈಸಿದರೆ ಅದುವೇ ಬಸವಣ್ಣನಿಗೆ ನಾವು ನೀಡುವ ಗೌರವ ಎಂದು ಹೇಳಿದರು. ಜಯನಗರದಿಂದ ಮಹಾತ್ಮಗಾಂಧಿ ರಸ್ತೆಯವರೆಗೆ ಬಸವ ಉತ್ಸವವನ್ನು ಹಮ್ಮಿಕೊಂಡು ರಾಜಧಾನಿಯ ವಿವಿಧ ಬಡಾವಣೆಗಳಲ್ಲಿ ವಚನ ಸಂದೇಶವನ್ನು ಹರುಡುವುದು ಬಳಗದ ಕಾರ್ಯವಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ ನೂರು ಶಾಲೆಗಳಲ್ಲಿ ವಚನ ತರಗತಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸನ್ಮಾನಗಳ ಹೆಸರಿನಲ್ಲಿ ವಿಐಪಿಗಳನ್ನು ಕರೆಸುವುದಕ್ಕಿಂತ ಜನಸಾಮಾನ್ಯರ ಬಳಿಗೆ ಸಂಸ್ಕೃತಿಯನ್ನು ತೆಗೆದುಕೊಂಡು ಹೋಗುವುದು ಬಳಗದ ಮುಖ್ಯ ಆಶಯ ಎಂದು ಹೇಳಿದ ಅವರು ಬಸವಾದಿ ಪ್ರಮಥರ ಬಗ್ಗೆ ಮಾತನಾಡಿದರೆ ಸಾಲದು, ಅದು ಬದುಕಿನಲ್ಲಿ ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟರು. ಬಸವ ಉತ್ಸವಕ್ಕೆ ಯಾವುದೇ ರಾಜಕೀಯ ನಾಯಕರಿಂದ ಹಣ ಸ್ವೀಕರಿಸಿಲ್ಲ ಎಂದು ಹೇಳಿದ ಅವರು, ಚುನಾವಣಾ ಸಂತೆಯ ಹೆಸರಿನಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನ ಜಯಂತಿಗೂ ಕಲಾತಂಡಗಳ ಪ್ರಾಯೋಜನೆ ಮಾಡದ ಸರಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಂಸ್ಕತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್‌ಪಾಟೀಲ್, ಬೇಲಿಮಠದ ಶಿವರುದ್ರಸ್ವಾಮಿಗಳು, ತರಳಬಾಳು ಕೇಂದ್ರದ ಡಾ. ಸಿದ್ದಯ್ಯ ಗುರೂಜಿ, ಖಾದಿ ಮಂಡಳಿಯ ಸಿಇಓ ಜಯಭವಸ್ವಾಮಿ, ಸಹಕಾರ ಸಂಘಗಳ ಅಪರ ನಿರ್ದೇಶಕ ಶ್ರೀಪ್ರಕಾಶ್ ಮಜಗೆ ಮೊದಲಾದವರು ಬಸವಣ್ಣನೊಡನೆ ಹೆಜ್ಜೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News