ಕಾಂಗ್ರೆಸ್ ಟಿಕೆಟ್ ವಂಚಿತರ ಬೆಂಬಲಿಗರಿಂದ ಕೆಪಿಸಿಸಿ ಎದುರು ಪ್ರತಿಭಟನೆ

Update: 2018-04-18 16:31 GMT

ಬೆಂಗಳೂರು, ಎ.18: ಟಿಕೆಟ್ ವಂಚಿತ ಕಾಂಗ್ರೆಸ್ ನಾಯಕರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಟಿಕೆಟ್ ವಂಚಿತ ಆಕಾಂಕ್ಷಿ ಗಿರೀಶ್ ಕೆ.ನಾಶಿ ಮತ್ತು ಹೆಬ್ಬಾಳ ಕ್ಷೇತ್ರದ ರೆಹಮಾನ್ ಷರೀಫ್ ಪರವಾಗಿ ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಮುಖಂಡರ ಭರವಸೆಯ ಮೇರೆಗೆ ನಮ್ಮ ನಾಯಕರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಟಿಕೆಟ್ ನೀಡದೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ: ಟಿಕೆಟ್ ಸಿಗದ ಕಾಂಗ್ರೆಸ್ ನಾಯಕರ ಬೆಂಬಲಿಗರು ಕ್ವೀನ್ಸ್ ರಸ್ತೆಯ ಮಧ್ಯೆದಲ್ಲಿಯೆ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಕ್ವೀನ್ಸ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದಲ್ಲಿ ವಾಹನ ದಟ್ಟಣೆಯಾಗಿ, ವಾಹನ ಸವಾರರು ಪರದಾಡುವಂತಾಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ವಾಹನ ದಟ್ಟಣೆಯನ್ನು ತಗ್ಗಿಸಲು ಹರಸಾಹಸ ಪಟ್ಟರು.

ಕಡೂರು ಕ್ಷೇತ್ರದ ಟಿಕೆಟ್ ಅಕಾಂಕ್ಷಿ ಕಡೂರು ನಂಜಪ್ಪ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ, ತಮ್ಮ ಇಡೀ ಜೀವನವನ್ನು ಕಾಂಗ್ರೆಸ್‌ಗೆ ಮೀಸಲಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕರು ನನಗೆ ಸರಿಯಾದ ರೀತಿಯಲ್ಲಿಯೆ ಪ್ರತಿಫಲವನ್ನು ನೀಡಿದ್ದಾರೆ. ಇಲ್ಲಿಗೆ ನನ್ನ ರಾಜಕೀಯ ಜೀವನ ಮುಗಿಯಿತು ಎಂದು ಎಂದು ತಮ್ಮ ನೋವನ್ನು ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News