ಅರಣ್ಯಾಧಿಕಾರಿ ಮನೆಯಲ್ಲಿ ಕಳವು ಪ್ರಕರಣ: ಇಬ್ಬರು ಯುವಕರ ಬಂಧನ

Update: 2018-04-18 16:45 GMT

ಬೆಂಗಳೂರು, ಎ.18: ನಗರದ ಯಲಹಂಕದ ನ್ಯಾಯಾಂಗ ಬಡಾವಣೆಯ ಅರಣ್ಯಾಧಿಕಾರಿಯೊಬ್ಬರ ಮನೆಯಲ್ಲಿ ನಡೆದ ಕಳವು ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ತಾನದ ಅಜ್ಮೀರ್ ನಗರ ನಿವಾಸಿಗಳಾದ ರಾಮ್‌ಸಿಂಹ(19) ಹಾಗೂ ರೋಕಿ (19) ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ ಆರೋಪಿಗಳಿಂದ 15 ಲಕ್ಷ ಮೌಲ್ಯದ 521 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

ಪ್ರಕರಣದ ವಿವರ: 2017ರ ಜೂ.22 ರಂದು ಹಾಡುಹಗಲೇ ಅರಣ್ಯಾಧಿಕಾರಿ ಶ್ರೀನಾಥ್ ಅವರ ಮನೆಗೆ ಬೀಗ ಮುರಿದು ಒಳ ನುಗ್ಗಿದ ಆರೋಪಿಗಳು, ಚಿನ್ನಾಭರಣ, ವಜ್ರದ ಕಲ್ಲುಗಳು, 5 ಸಾವಿರ ನಗದು ದೋಚಿ ಪರಾರಿಯಾಗಿ, ರಾಜಸ್ತಾನದಲ್ಲಿ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದರು.

ನಾಲ್ಕೈದು ತಿಂಗಳ ನಂತರ ಮತ್ತೆ ರಾಜ್ಯಕ್ಕೆ ಬಂದಿದ್ದ ಆರೋಪಿಗಳು, ರಾಮನಗರದಲ್ಲಿ ಕಳ್ಳತನ ಕೃತ್ಯ ನಡೆಸುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು, ಪೊಲೀಸರ ಬಂಧನಕ್ಕೊಳಗಾಗಿದ್ದರು.

ಅಲ್ಲಿಂದ ರಾಮನಗರ ಜಿಲ್ಲಾ ಕೇಂದ್ರಕಾರಾಗೃಹದಲ್ಲಿ ಆರೋಪಿಗಳು ಶಿಕ್ಷೆ ಅನುಭವಿಸುತ್ತಿದ್ದು, ಶ್ರೀನಾಥ್ ಅವರ ಮನೆಯಲ್ಲಿ ನಡೆದ ಕಳ್ಳತನದ ಜಾಡು ಹಿಡಿದ ಯಲಹಂಕ ಪೊಲೀಸರಿಗೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿಗಳು ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆಯಲ್ಲಿ ಆರೋಪಿಗಳು ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದು, ಅವರನ್ನು ಅಜ್ಮೀರ್‌ಗೆ ಕರೆದೊಯ್ದು ಅಲ್ಲಿ ಮಾರಾಟ ಮಾಡಿದ್ದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡು ಬರಲಾಗಿದೆ. ಆರೋಪಿಗಳು ನ್ಯಾಯಾಧೀಶರ ಮುಂದೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಾಟಕ ಮಾಡಿದರಾದರೂ ಪೊಲೀಸರ ಸತತ ಶ್ರಮ ನಡೆಸಿದರು ಎಂದು ಕಲಾಕೃಷ್ಣಸ್ವಾಮಿ ಹೇಳಿದರು.

ವಿರೋಧ: ಅಜ್ಮೀರ್‌ನಲ್ಲಿ ಆಭರಣವನ್ನು ವಶಪಡಿಸಿಕೊಳ್ಳುವಾಗ ಸ್ಥಳೀಯರ ವಿರೋಧ ಕಂಡು ಬಂದಿದ್ದು, ಅದನ್ನು ಎದುರಿಸಿ ಇನ್ಸ್‌ಪೆಕ್ಟರ್ ಮಂಜೇಗೌಡ ಮತ್ತವರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News