ಮಾಜಿ ಮುಂಬೈ ಪೊಲೀಸ್ ಮುಖ್ಯಸ್ಥ ಪಟ್ನಾಯಕ್ ಬಿಜೆಡಿಗೆ ಸೇರ್ಪಡೆ

Update: 2018-04-19 13:04 GMT

ಮುಂಬೈ,ಎ.19: ಮುಂಬೈನ ಇನ್ನೋರ್ವ ಮಾಜಿ ಪೊಲೀಸ್ ಮುಖ್ಯಸ್ಥರು ರಾಜಕೀಯ ರಂಗವನ್ನು ಪ್ರವೇಶಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದ ಸತ್ಯಪಾಲ ಸಿಂಗ್ ಅವರು ಕೇಂದ್ರದಲ್ಲಿ ರಾಜ್ಯಸಚಿವರಾಗಿದ್ದರೆ,2011ರಲ್ಲಿ ಮುಂಬೈ ಪೊಲೀಸ್ ವರಿಷ್ಠರಾಗಿದ್ದ ಅರೂಪ್ ಪಟ್ನಾಯಕ್ ಅವರು ಗುರುವಾರ ಬಿಜು ಜನತಾ ದಳ(ಬಿಜೆಡಿ)ಕ್ಕೆ ಸೇರ್ಪಡೆ ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ಅಧ್ಯಕ್ಷ ನವೀನ ಪಟ್ನಾಯಕ್ ಅವರು,ಅರೂಪ್ ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಪ್ರಶಂಸಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅರೂಪ್,ಪಕ್ಷವು ಸೂಚಿಸಿದರೆ ಚುನಾವಣೆಗಳಿಗೆ ಸ್ಫರ್ಧಿಸುವುದಾಗಿ ತಿಳಿಸಿದರು.

1979ರ ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಅರೂಪ್ 2015ರಲ್ಲಿ ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ಮತ್ತು ಕಲ್ಯಾಣ ನಿಗಮದ ಮಹಾ ನಿರ್ದೇಶಕರಾಗಿ ನಿವೃತ್ತಿ ಗೊಳ್ಳುವ ಮುನ್ನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮುಂಬೈ ಪೊಲೀಸ್ ಆಯುಕ್ತರಾಗಿದ್ದಾಗ ಅವರು ಬಾರ್‌ಗಳು ಮತ್ತು ಪಬ್‌ಗಳ ಮೇಲೆ ದಾಳಿಗಳನ್ನು ನಡೆಸಲು ವಿವಾದಾತ್ಮಕ ಎಸಿಪಿ ವಸಂತ ಧೋಬ್ಲೆ ಅವರನ್ನು ಮುಂಬೈ ಪೊಲೀಸ್‌ನ ಸೋಷಿಯಲ್ ಸರ್ವಿಸ್ ಬ್ರಾಂಚ್‌ನ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದುಕೊಂಡೇ ಬೀದಿಗಿಳಿಯುತ್ತಿದ್ದ ಧೋಬ್ಲೆ ಎಸ್‌ಎಸ್‌ಬಿಗೆ ಸಂಬಂಧಿಸಿದ ಪ್ರಕರಣಗಳನ್ನು ನೇರವಾಗಿ ಆಯುಕ್ತರಿಗೆ ವರದಿ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News