‘ಹಿಂದೂ-ಮುಸ್ಲಿಮ್ ಧರ್ಮದ ನಡುವಿನ ಚುನಾವಣೆ ಇದು’

Update: 2018-04-19 17:03 GMT

ಬೆಂಗಳೂರು, ಎ. 19: ‘ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಅಲ್ಲ. ಹಿಂದೂ-ಮುಸ್ಲಿಮ್ ಧರ್ಮದ ಮಧ್ಯೆ ನಡೆಯುತ್ತಿದೆ’ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿಡಿಯೋ ವೈರಲ್ ಆಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸೂಳೇಭಾವಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಜಯ್ ಪಾಟೀಲ್ ಭಾಷಣದ ತುಣುಕುಗಳು ವಾಟ್ಸ್ ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ತೀವ್ರ ವಿವಾದ ಸೃಷ್ಟಿಸಿದೆ.

‘ಯಾರಿಗೆ ಬಾಬ್ರಿ ಮಸೀದಿ ಕಟ್ಟಬೇಕಾಗಿದೆಯೋ, ಟಿಪ್ಪುಸುಲ್ತಾನ್ ಜಯಂತಿ ಆಚರಿಸಬೇಕಾಗಿದೆಯೋ ಅವರು ಕಾಂಗ್ರೆಸ್‌ಗೆ ಮತ ಮಾಡಲಿ. ಶಿವಾಜಿ, ಸಂಭಾಜಿ, ವೀರಸಾವರ್ಕರ್, ಸ್ವಾಮಿ ವಿವೇಕಾನಂದ ಹಾಗೂ ಲಕ್ಷ್ಮಿ ಗುಡಿಯಲ್ಲಿ ಪೂಜೆ ಮಾಡುವವರು ಬೇಕಾಗಿದ್ದರೆ ನೀವು ಬಿಜೆಪಿಗೆ ಮತ ಹಾಕಿ, ಸಂಜಯ ಪಾಟೀಲನನ್ನು ನೋಡೋಕೆ ಹೋಗಬೇಡಿ’ ಎಂದು ಪಾಟೀಲ್ ಹೇಳಿದ್ದಾರೆ.

‘ಲಕ್ಷ್ಮಿ ಹೆಬ್ಬಾಳ್ಕರ್ ಹೇಳಲಿ, ನಾನು ಎದೆ ಮೇಲೆ ಕೈಇಟ್ಟು ಹೇಳುವುದಕ್ಕೆ ಸಿದ್ಧ. ಇದು ಭಾರತ ದೇಶ, ಹಿಂದೂಗಳ ದೇಶ. ರಾಮ ಹುಟ್ಟಿದ ದೇಶ. ಅಯೋಧ್ಯೆಯಲ್ಲಿ ಮಂದಿರ ಕಟ್ಟಬೇಕು. ಇದಕ್ಕಾಗಿ ಏನೇ ಮಾಡುವುದಕ್ಕೂ ತಯಾರಿದ್ದೇನೆ. ಮಂದಿರ ಕಟ್ಟೋಣ ಎಂದು ಲಕ್ಷ್ಮಿಹೆಬ್ಬಾಳ್ಕರ್ (ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ) ಹೇಳಲಿ. ನೀವೆಲ್ಲಾ ಆಕೆಗೇ ಓಟು ಹಾಕಿ. ಅವರು ಹೇಳೋಕೆ ಸಾಧ್ಯವಿಲ್ಲ. ಅವರು ಬಾಬ್ರಿ ಮಸೀದಿ ಕಟ್ಟುವವರು, ರಾಮಮಂದಿರ ಕಟ್ಟುವವರಲ್ಲ’ ಎಂದು ಟೀಕಿಸಿದ್ದಾರೆ.

ಹಿಂದೂಗಳು ಇರುವುದೆಂದರೆ ಭಾರತ ದೇಶದಲ್ಲಿ ಮಾತ್ರ. ಇಲ್ಲಿ ಹಿಂದೂಧರ್ಮ ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕು. ಅಭಿವೃದ್ಧಿ ಬೇಕು ನಿಜ. ಆದರೆ, ಯಾರು ಧರ್ಮದ ಪರವಿದ್ದಾರೆ, ಯಾರು ವಿರುದ್ಧವಿದ್ದಾರೆ ಎನ್ನುವುದನ್ನು ಮತದಾರರು ನೋಡಬೇಕು’ ಎಂದಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತಾನು ಮಾತನಾಡಿದ್ದು, ಅದು ಯಾವುದೇ ಸಾರ್ವಜನಿಕ ಸಮಾರಂಭವಲ್ಲ ಎಂದು ಶಾಸಕ ಸಂಜಯ್ ಪಾಟೀಲ್ ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದ್ದಾರೆ. ಆದರೆ, ಇದರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News