ನಗದು ಕೊರತೆ: ಬ್ಯಾಂಕ್ ಯೂನಿಯನ್‌ನಿಂದ ಪ್ರತಿಭಟನೆಯ ಎಚ್ಚರಿಕೆ

Update: 2018-04-19 15:05 GMT

ವಡೋದರ, ಎ.19: ದೇಶದ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗಿರುವ ಕಾರಣದಿಂದ ಸಾರ್ವಜನಿಕರ ಆಕ್ರೋಶವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿರುವ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಸದ್ಯದ ಪರಿಸ್ಥಿತಿಗೆ ಕೇಂದ್ರ ಸರಕಾರ ಮತ್ತು ಆರ್‌ಬಿಐ ಕಾರಣ ಎಂದು ಯೂನಿಯನ್ ಗುರುವಾರ ತಿಳಿಸಿದೆ. ಕೇಂದ್ರ ಸರಕಾರ ಮತ್ತು ಆರ್‌ಬಿಐ ಸೃಷ್ಟಿಸಿರುವ ಸಮಸ್ಯೆಗೆ ಬ್ಯಾಂಕ್ ಉದ್ಯೋಗಿಗಳು ಸಾರ್ವಜನಿಕರಿಂದ ಬೈಗುಳಗಳನ್ನು ಕೇಳಬೇಕಾಗಿದೆ ಎಂದು ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲಂ ತಿಳಿಸಿದ್ದಾರೆ. ನಗದು ಕೊರತೆಯಲ್ಲಿ ನಮ್ಮ ತಪ್ಪೇ ಇಲ್ಲದಿದ್ದರೂ ಗ್ರಾಹಕರು ಬಂದು ನಮಗೆ ಬೈಯ್ಯುತ್ತಾರೆ. ಕೇವಲ ಹೇಳಿಕೆಗಳನ್ನು ನೀಡಿದರೆ ಸಾಕಾಗುವುದಿಲ್ಲ. ಕರೆನ್ಸಿ ನೋಟುಗಳ ಪೂರೈಕೆಯನ್ನು ಉತ್ತಮಗೊಳಿಸಲು ಸೂಕ್ತ ಮತ್ತು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಹಲವು ರಾಜ್ಯಗಳಲ್ಲಿ, ಮುಖ್ಯವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ್, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಎಟಿಎಂಗಳಲ್ಲಿ ತೀವ್ರ ನಗದು ಕೊರತೆ ಉಂಟಾಗಿದೆ. 2016ರ ನವೆಂಬರ್‌ನಲ್ಲಿ 1000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ 2000 ರೂ. ಮುಖಬೆಲೆಯ ನೋಟನ್ನು ಪರಿಚಯಿಸಿದಾಗಲೇ ಈ ಸಮಸ್ಯೆಯ ಆರಂಭವಾಗಿತ್ತು. ಭ್ರಷ್ಟಾಚಾರ ಮತ್ತು ನಗದು ಶೇಖರಣೆಯನ್ನು ತಡೆಯುವ ಉದ್ದೇಶದಿಂದ ಅಧಿಕ ಮೌಲ್ಯದ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿತ್ತು. ಆದರೆ 2,000 ರೂ. ನೋಟುಗಳಿಂದ ಅದು ಮತ್ತಷ್ಟು ಸುಲಭವಾಗಿದೆ ಎಂದು ವೆಂಕಟಾಚಲಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News