ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು: ಪ್ರಕಾಶ್ ಜಾವಡೇಕರ್

Update: 2018-04-19 17:35 GMT

ಬೆಂಗಳೂರು, ಎ.19: ನ್ಯಾಯಮೂರ್ತಿ ಲೋಯಾ ಸಾವಿನ ಪ್ರಕರಣ ರಾಜಕೀಯ ಪ್ರೇರಿತ ಎಂದು ಹೇಳಿ ಸುಪ್ರೀಂ ಕೋರ್ಟ್ ದೂರನ್ನು ವಜಾಗೊಳಿಸಿದೆ. ಈ ಪ್ರಕರಣದ ಹಿಂದೆ ಕಾಂಗ್ರೆಸ್ ಇದೆ. ಹೀಗಾಗಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದ್ದಾರೆ.

ಗುರುವಾರ ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಮೂರ್ತಿ ಲೋಯಾ ಸಾವಿನ ಕುರಿತು ರಾಜಕೀಯ ಪ್ರೇರಿತ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜಕೀಯ ಕುತಂತ್ರದಿಂದ ಅಮಿತ್ ಶಾ ಹೆಸರನ್ನು ಹಾಳುಮಾಡುವ ಉದ್ದೇಶದಿಂದ ಕಾಂಗ್ರೆಸ್ ಸಂಚು ಹೂಡಿತ್ತು. ಈ ಪ್ರಕರಣ ಸಂಬಂಧ ರಾಹುಲ್ ಕ್ಷಮೆಯಾಚಿಸಬೇಕು ಎಂದರು.

ಕಾಂಗ್ರೆಸ್‌ಗೆ ರಾಜಕೀಯವಾಗಿ ಬಿಜೆಪಿಯನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ,ರಾಜಕೀಯ ಕುತಂತ್ರದಿಂದ ನ್ಯಾಯಾಲಯದಲ್ಲಿ ದಾವೆ ಹೂಡಿ ಬಿಜೆಪಿಗೆ ಚ್ಯುತಿ ತರುವ ಕೊಳಕು ರಾಜಕೀಯ ಮಾಡಿತ್ತು. ನ್ಯಾಯಮೂರ್ತಿ ಲೋಯಾ ಸಾವು ಸ್ವಾಭಾವಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಹೇಳಿದರು.

ದೇಶದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಸೋಲುತ್ತ ಬರುತ್ತಿರುವ ಕಾಂಗ್ರೆಸ್ ಕರ್ನಾಟಕದಲ್ಲಿಯೂ ಸೋಲುತ್ತೇವೆ ಎಂಬ ಭಯದಿಂದ ಇಂತಹ ಗಿಮಿಕ್ ರಾಜಕಾರಣದಲ್ಲಿ ತೊಡಗಿದೆ. ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಇಂತಹ ಮನಸ್ಥಿತಿಯ ಕಾಂಗ್ರೆಸ್‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಜಾವಡೇಕರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ವಕ್ತಾರೆ ಮಾಳವಿಕ ಸೇರಿ ಪ್ರಮುಖರಿದ್ದರು.

ಸತ್ಯ ಗೆದ್ದಿದೆ..

ಕಾಂಗ್ರೆಸ್ ಅಡ್ಡದಾರಿಯಲ್ಲಿ ರಾಜಕಾರಣ ಮಾಡ್ತಿದೆ. ನ್ಯಾಯಮೂರ್ತಿ ಲೋಯಾ ಸಹಜ ಸಾವು ಎಂದು ಅವರ ಮನೆಯವರೇ ಹೇಳಿದರೂ ಕೇಳದೆ ಆ ಕೇಸ್‌ನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿತ್ತು. ಇಂದು ರಾಜಕೀಯ ಕಾರಣಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳಬೇಡಿ ಎಂದು ನ್ಯಾಯಾಲಯ ತಪರಾಕಿ ನೀಡಿದೆ. ಈ ಮೂಲಕ ಸತ್ಯ ಗೆದ್ದಿದೆ. ಹೀಗಾಗಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಮತ್ತೊಮ್ಮೆ ಮತಯಾಚನೆಗೆ ಬರುವ ಮುನ್ನ ದೇಶದ ಕ್ಷಮೆ ಕೇಳಬೇಕು.
-ಶೋಭಾ ಕರಂದ್ಲಾಜೆ, ಸಂಸದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News