ವೇತನ ಆಯೋಗದ ಶಿಫಾರಸು ಜಾರಿಗೆ ಆಕ್ಷೇಪಣೆ ಇಲ್ಲ: ಕೇಂದ್ರ ಚುನಾವಣಾ ಆಯೋಗದ ಸಮ್ಮತಿ

Update: 2018-04-19 18:33 GMT

ಬೆಂಗಳೂರು, ಎ. 19: ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಕೇಂದ್ರ ಚುನಾವಣಾ ಆಯೋಗ ಸಮ್ಮತಿಸಿದ್ದು, ಇದೇ ತಿಂಗಳಿನಿಂದ ರಾಜ್ಯ ಸರಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿ ಅನ್ವಯವಾಗಲಿದೆ.

ಆರನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದ್ದ ರಾಜ್ಯ ಸರಕಾರ, ಸರಕಾರಿ ನೌಕರರ ವೇತನ ಪರಿಷ್ಕರಿಸಿತ್ತು. ಈ ನಡುವೆ ರಾಜ್ಯ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪರಿಷ್ಕೃತ ವೇತನ ಅನ್ವಯ ಕೋರಿ ರಾಜ್ಯ ಚುನಾವಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.

ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಅನ್ವಯಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಮೊಹಲ್ ಪತ್ರ ರವಾನಿಸಿದ್ದಾರೆ.

ಸರಕಾರ ಆರನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರಕಾರಿ ನೌಕರರ ವೇತನ, ಭತ್ತೆ ಮತ್ತು ಪಿಂಚಣಿಗಳನ್ನು 2017ರ ಜುಲೈ 1ರಿಂದಲೇ ಪರಿಷ್ಕರಿಸಲಾಗಿದೆ. ಆದರೆ, 2018ರ ಎ.1ರಿಂದ ಅನ್ವಯವಾಗುವಂತೆ ಪರಿಷ್ಕರಣೆಯ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡಲು ಮಾ.1ಕ್ಕೆ ಆದೇಶವನ್ನು ಹೊರಡಿಸಲಾಗಿತ್ತು. ರಾಜ್ಯ ಸರಕಾರ ಹೊರಡಿಸಿದ ಆದೇಶಕ್ಕೆ ಮಾ.2ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಘಟನೋತ್ತರ ಅನುಮೋದನೆ ದೊರೆತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News