ನ್ಯಾಯದಿಂದ ವಂಚಿತವಾದ ನ್ಯಾಯ ವ್ಯವಸ್ಥೆ

Update: 2018-04-20 04:12 GMT

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ನ್ಯಾಯಾಲಯದ ವಿಶ್ವಾಸಾರ್ಹತೆಯ ಕುರಿತಂತೆ ಸ್ವತಃ ನ್ಯಾಯಾಧೀಶರೇ ಅನುಮಾನ ವ್ಯಕ್ತಪಡಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರೇ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿದರು. ಇದರ ಬೆನ್ನಿಗೇ, ನ್ಯಾಯಾಲಯದಿಂದ ಹೊರಬೀಳುತ್ತಿರುವ ತೀರ್ಪುಗಳು ಪ್ರಜಾಸತ್ತೆಯ ಆಶಯಕ್ಕೆ ಧಕ್ಕೆ ತರುತ್ತಿದೆ ಎಂದು ದೇಶದ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ವಿಶೇಷ ನ್ಯಾಯಾಲಯದಿಂದ ಹೊರಬಿದ್ದ ತೀರ್ಪು ಹಾಗೂ ವಿಶೇಷ ಸಿಬಿಐ ನ್ಯಾಯಾಧೀಶ ಬಿ. ಎಚ್. ಲೋಯಾ ಅವರ ನಿಗೂಢ ಸಾವಿನ ತನಿಖೆಗೆ ಸಂಬಂಧಿಸಿ ಗುರುವಾರ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಈ ಜನರ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿವೆ. ನ್ಯಾಯಾಂಗದಲ್ಲಿ ಸರಕಾರ ಹಸ್ತಕ್ಷೇಪ ನಡೆಸುತ್ತಿದೆ ಎನ್ನುವ ವ್ಯಾಪಕ ಕೂಗನ್ನು ಸಮರ್ಥಿಸುವಂತಹ ದುರ್ಬಲ ತೀರ್ಪುಗಳು ನ್ಯಾಯಾಲಯದಿಂದ ಹೊರಬೀಳತೊಡಗಿವೆ ಎಂದು ನಾಡಿನ ಸಂವಿಧಾನತಜ್ಞರು ಆತಂಕಪಡುತ್ತಿದ್ದಾರೆ. ಮಕ್ಕಾ ಮಸೀದಿ ಸ್ಫೋಟ ಈ ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣವಾಗಿದೆ. ಇಂತಹ ಪ್ರಕರಣವನ್ನು ಎನ್‌ಐಎ ನಿಭಾಯಿಸಿದ ರೀತಿಯಿಂದಾಗಿ ಆರೋಪಿಗಳು ಬಿಡುಗಡೆಯ ಹೊಸಿಲಲ್ಲಿ ನಿಂತಿದ್ದಾರೆ. ಸರಿಯಾದ ಸಾಕ್ಷಗಳು ಸಿಗಲಿಲ್ಲ ಎಂದು ಅಸೀಮಾನಂದ ಮತ್ತು ಆತನ ಸಂಗಡಿಗರು ಶಿಕ್ಷೆಯಿಂದ ಪಾರಾದುದಲ್ಲ. ಸರಿಯಾದ ಸಾಕ್ಷಗಳನ್ನು ಎನ್‌ಐಎ ನೀಡಲಿಲ್ಲ ಎನ್ನುವ ಕಾರಣದಿಂದ ಆರೋಪಿಗಳು ತಪ್ಪಿಸಿಕೊಂಡರು. ಈ ದೇಶದ ಪ್ರಜಾಸತ್ತೆಯ ಬುಡವನ್ನೇ ಅಲ್ಲಾಡಿಸಿರುವ ಈ ಕ್ರಿಮಿನಲ್ ಪ್ರಕರಣದ ಸರಕಾರಿ ವಕೀಲರೂ ಅನನುಭವಿಗಳಾಗಿರಲಿಲ್ಲ ಎನ್ನುವ ಇನ್ನೊಂದು ಆರೋಪವೂ ಇದೆ.

ಎಟಿಎಸ್ ಮತ್ತು ಸಿಬಿಐ ಒದಗಿಸಿದ ಸಾಕ್ಷಗಳನ್ನು ಎನ್‌ಐಎ ನ್ಯಾಯಾಲಯಕ್ಕೆ ನೀಡಲಿಲ್ಲ. ಒಟ್ಟಿನಲ್ಲಿ ತನಿಖಾ ತಂಡದ ಪ್ರಯತ್ನ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿರಲಿಲ್ಲ. ಬದಲಿಗೆ ಅವರನ್ನು ಶಿಕ್ಷೆಯಿಂದ ಪಾರು ಮಾಡುವುದಾಗಿತ್ತು. ಅಸೀಮಾನಂದರನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿದ ಬಳಿಕದ ನ್ಯಾಯಾಧೀಶರ ನಡೆಯೂ ಅನುಮಾನಾಸ್ಪದವಾಗಿದೆ. ತೀರ್ಪು ನೀಡಿದ ಬೆನ್ನಿಗೇ ನ್ಯಾಯಾಧೀಶರು ರಾಜೀನಾಮೆಯನ್ನು ನೀಡಿದರು. ಅದಕ್ಕೆ ಸೂಕ್ತ ಕಾರಣಗಳೂ ಇರಲಿಲ್ಲ. ರಾಜೀನಾಮೆ ನೀಡಬೇಕಾದಂತಹ ಒತ್ತಡವನ್ನು ಅವರಿಗೆ ಸೃಷ್ಟಿಸಿದವರು ಯಾರು? ಯಾವುದಾದರೂ ಬ್ಲ್ಯಾಕ್‌ಮೇಲ್‌ಗೆ ಅವರು ಒಳಗಾಗಿದ್ದರೇ? ಇದೀಗ ಅವರ ರಾಜೀನಾಮೆ ತಿರಸ್ಕೃತವಾಗಿದೆಯಾದರೂ, ನ್ಯಾಯವ್ಯವಸ್ಥೆಯ ಹಿತಾಸಕ್ತಿಯಿಂದ ಅವರ ರಾಜೀನಾಮೆಯ ಕಾರಣಗಳನ್ನು ಹುಡುಕುವುದು ಅತ್ಯಗತ್ಯ. ವಿಪರ್ಯಾಸವೆಂದರೆ, ಅಸೀಮಾನಂದ ಮತ್ತು ಅವರ ಸಂಗಡಿಗರನ್ನು ನಿರ್ದೋಷಿಯೆಂದು ತೀರ್ಪು ನೀಡಿದ ನ್ಯಾಯಾಧೀಶರೇ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವೊಂದನ್ನು ಎದುರಿಸುತ್ತಿದ್ದಾರೆ. ಭೂವಿವಾದ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನಿಗೆ ಲಂಚ ಪಡೆದು ಅವಸರದ ಜಾಮೀನು ನೀಡಿದ್ದಾರೆ ಎನ್ನುವ ಆರೋಪ ನ್ಯಾಯಾಧೀಶರ ಮೇಲಿದೆ. ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯಾಧೀಶರ ಮೇಲಿರುವ ಆರೋಪ ಸಾಬೀತಾದರೆ, ಮಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿ ಅವರು ನೀಡಿದ ತೀರ್ಪಿನ ಗತಿ ಏನು? ಈ ಹಿನ್ನೆಲೆಯಲ್ಲಿಯೇ ನ್ಯಾಯಾಧೀಶರು ರಾಜೀನಾಮೆಯನ್ನು ನೀಡುವಂತಹ ಪರೋಕ್ಷ ಒತ್ತಡ ನಿರ್ಮಾಣವಾಯಿತೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕುವುದು ಕಷ್ಟ. ಆದರೆ, ಉಗ್ರರು ಯಾವ ಧರ್ಮಕ್ಕೇ ಸೇರಿರಲಿ, ಅವರನ್ನು ರಕ್ಷಿಸುವುದೆಂದರೆ ಅದು ದೇಶವನ್ನು ಅಪಾಯದ ಕಡೆಗೆ ತಳ್ಳುವುದು.

ಪರೋಕ್ಷವಾಗಿ ಉಗ್ರವಾದಕ್ಕೆ ಸಮ್ಮತಿ ನೀಡಿದಂತೆ. ಒಬ್ಬ ಉಗ್ರನ ರಕ್ಷಣೆ ಸಾವಿರ ಉಗ್ರರ ಸೃಷ್ಟಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಅಸೀಮಾನಂದರ ಆರೋಪವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿರುವ ಎನ್‌ಐಎಯಿಂದಾಗಿ ದೇಶ ಅವಮಾನದಿಂದ ತಲೆತಗ್ಗಿಸುವಂತಾಗಿದೆ. ಮಕ್ಕಾ ಮಸೀದಿ ಸ್ಫೋಟ ಪ್ರಕರಣ ಹೀಗೆ ಹಳ್ಳ ಹಿಡಿಯುತ್ತಿರುವ ಬೆನ್ನಿಗೇ, ಲೋಯಾ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದಿಂದ ನಿರಾಶೆಯ ತೀರ್ಪು ಹೊರಬಿದ್ದಿದೆ. ಬಿ. ಎಚ್. ಲೋಯಾ ವಿಶೇಷ ಸಿಬಿಐ ನ್ಯಾಯಾಧೀಶರಾಗಿ, ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ತನಿಖೆಯ ವಿಚಾರಣೆ ನಡೆಸುತ್ತಿದ್ದರು. ಈ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗಿಯಾಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಲೋಯಾ ನಿಗೂಢವಾಗಿ ಮೃತಪಟ್ಟರು. ಇದೊಂದು ಅಸಹಜ ಸಾವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಇನ್ನೋರ್ವ ನ್ಯಾಯಾಧೀಶರಿಂದ ಭಾರೀ ಮೊತ್ತದ ಆಮಿಷವನ್ನು ಒಡ್ಡಲಾಗಿತ್ತು ಎಂದೂ ದೂರಿದ್ದರು. ಲೋಯಾ ಅವರ ಮೃತದೇಹ ಸ್ಥಿತಿಯ ಕುರಿತಂತೆಯೂ ಅನುಮಾನಗಳಿವೆ. ಆತುರಾತುರವಾಗಿ ಮೃತದೇಹವನ್ನು ಮನೆಗೆ ತಲುಪಿಸಲಾಗಿತ್ತು. ಇಲ್ಲಿ ಲೋಯಾ ಪ್ರಕರಣದ ತನಿಖೆ ಅವರ ಕುಟುಂಬದ ಅಗತ್ಯಕ್ಕಿಂತಲೂ ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸ್ಥಾಪಿಸಲು ಅತ್ಯಗತ್ಯವಾಗಿದೆ.

ಒಬ್ಬ ನ್ಯಾಯಾಧೀಶರ ಮೇಲೆ ಲಂಚ ನೀಡಿದ ಆರೋಪವನ್ನು ಮಾಡಲಾಗಿದೆ. ಜೊತೆಗೆ ಲೋಯಾ ಅವರ ಸಾವು ಕೊಲೆ ಎಂದು ಸಂಶಯಿಸಲಾಗಿದೆ. ಇದು ನ್ಯಾಯಾಧೀಶರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಆರೋಪಗಳಾಗಿವೆ. ನ್ಯಾಯ ವ್ಯವಸ್ಥೆ ತನ್ನನ್ನು ತಾನು ರಕ್ಷಿಸಲು ವಿಫಲವಾದರೆ, ಉಳಿದವರಿಗೆ ಯಾವ ರೀತಿಯಲ್ಲಿ ರಕ್ಷಣೆಯನ್ನು ನೀಡೀತು ಎಂಬ ಪ್ರಶ್ನೆ ಲೋಯಾ ಸಾವಿನಿಂದ ಎದ್ದಿದೆ. ಆದುದರಿಂದ ಒಂದು ಗಂಬೀರ ತನಿಖೆಯನ್ನು ನಡೆಸಿ, ತನ್ನ ಮೇಲಿರುವ ಆರೋಪವನ್ನೂ ನಿವಾರಿಸಿ, ಲೋಯಾ ಸಾವಿನ ನಿಗೂಢತೆಯನ್ನು ಬಿಡಿಸುವುದು ನ್ಯಾಯಾಲಯದ ಕರ್ತವ್ಯವಾಗಿತ್ತು. ಆದರೆ, ಇಲ್ಲಿ ಸುಪ್ರೀಂಕೋರ್ಟ್ ತನಿಖೆ ನಡೆಯುವ ಅಗತ್ಯವೇ ಇಲ್ಲ ಎಂದು ಹೇಳಿ ಜಾರಿಕೊಂಡಿದೆ. ತನಿಖೆ ನಡೆದರೆ ಸತ್ಯಗಳು ಹೊರಬೀಳಬಹುದು ಎನ್ನುವ ಆತಂಕ ನ್ಯಾಯಾಲಯಕ್ಕಿದೆಯೇ? ದೇಶದ ಭದ್ರತೆಗೆ ಸಂಬಂಧ ಪಟ್ಟ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೊಬ್ಬರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದಾಗ ಮತ್ತು ಅದೇ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರೊಬ್ಬರ ಮೇಲೆ ಲಂಚ ನೀಡುವ ಆರೋಪ ಬಂದಾಗ ಅದನ್ನು ಸರಿ ಪಡಿಸುವ ಮಾರ್ಗ ಅದರ ತನಿಖೆ ನಡೆಯದಂತೆ ತಡೆಯುವುದಲ್ಲ. ಬದಲಿಗೆ, ತನಿಖೆ ನಡೆಸಿ ಯಾವುದು ನಿಜ, ಯಾವುದು ಸುಳ್ಳು ಎನ್ನುವುದನ್ನು ದೇಶಕ್ಕೆ ಸ್ಪಷ್ಟಪಡಿಸುವುದು. ಸುಪ್ರೀಂಕೋರ್ಟ್‌ನ ತೀರ್ಪಿನಿಂದಾಗಿ, ಸ್ವತಃ ನ್ಯಾಯವ್ಯವಸ್ಥೆಯೇ ನ್ಯಾಯದಿಂದ ವಂಚಿತವಾದಂತಾಗಿದೆ. ಅಷ್ಟೇ ಅಲ್ಲ ಕೇಂದ್ರದ ಪ್ರಮುಖ ನಾಯಕರೊಬ್ಬರು ಈ ತೀರ್ಪಿನಿಂದ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News