ಮರು ಮದುವೆಗಾಗಿ ಪೆರೋಲ್ ಕೇಳಿದ ಅಬು ಸಲೀಂ

Update: 2018-04-21 04:35 GMT

ಮುಂಬೈ, ಎ. 21: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಬು ಸಲೀಂ, ಎರಡನೇ ಮದುವೆಗಾಗಿ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದಾನೆ.

ಫೆಬ್ರವರಿ 16ರಂದು ಸಲೀಂ, ತಲೋಜಾ ಜೈಲು ಅಧಿಕಾರಿಗಳಿಗೆ ಪತ್ರ ಬರೆದು, 45 ದಿನಗಳ ಪೆರೋಲ್ ಕೋರಿದ್ದಾನೆ. ವಿಶೇಷ ವಿವಾಹ ಕಾಯ್ದೆಯಡಿ ಸೈಯದ್ ಬಹರ್ ಕೌಸರ್ ಅಲಿಯಾಸ್ ಹೀನಾ ಎಂಬುವವರನ್ನು ವಿವಾಹವಾಗಲು ಬಯಸಿದ್ದಾಗಿ ಸಲೀಂ ವಿವರಿಸಿದ್ದಾನೆ.

12 ವರ್ಷ ಮೂರು ತಿಂಗಳು 14 ದಿನಗಳಿಂದ ಜೈಲಿನಲ್ಲಿದ್ದು, ಇದುವರೆಗೂ ರಜೆ ಪಡೆದಿಲ್ಲ ಎಂದು ಸಲೀಂ ಅರ್ಜಿಯಲ್ಲಿ ಹೇಳಿದ್ದಾನೆ. ಈ ಅರ್ಜಿ ಮತ್ತು ಆತನ ಹಿನ್ನೆಲೆಯನ್ನು ಕೊಂಕಣ್ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮಾರ್ಚ್ 27ರಂದು ಕಳುಹಿಸಲಾಗಿದೆ. ವಿವರಗಳನ್ನು ದೃಢೀಕರಿಸಿದ ಬಳಿಕ, ಪತ್ರ ಹಾಗೂ ಆ ಬಗೆಗಿನ ಅಭಿಪ್ರಾಯ ವರದಿಯನ್ನು ಥಾಣೆ ಪೊಲೀಸ್ ಆಯುಕ್ತರಿಗೆ ಎ. 5, 11 ಹಾಗೂ 16ರಂದು ಕಳುಹಿಸಲಾಗಿದೆ. ಅಲ್ಲಿಂದ ಪರಿಶೀಲನೆಗಾಗಿ ಅರ್ಜಿ ಮುಂಬ್ರಾ ಠಾಣೆಗೆ ಬಂದಿದೆ. ಪೊಲೀಸರು ಇದೀಗ ಹೀನಾ ಕುಟುಂಬದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.

ಪೆರೋಲ್ ಅವಧಿಯಲ್ಲಿ ಮುಂಬ್ರಾದಲ್ಲಿರುವ ಹೀನಾ ನಿವಾಸದಲ್ಲಿ ವಾಸ್ತವ್ಯ ಇರುವುದಾಗಿ ಸಲೀಂ ಹೇಳಿದ್ದಾನೆ. ಮುಹಮ್ಮದ್ ಸಲೀಂ ಅಬ್ದುಲ್ ರಝಾಕ್ ಮೆಮೊನ್ ಹಾಗೂ ಮುಹಮ್ಮದ್ ರಫೀಕ್ ಸೈಯದ್ ಅವರು ಗ್ಯಾರೆಂಟರ್‌ಗಳಾಗಿರುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಹೀನಾ, ಆಕೆಯ ತಾಯಿ ಹಾಗೂ ರಫೀಕ್ ಸೈಯದ್ ಅವರು ಮುಂಬ್ರಾ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ.

2014ರಲ್ಲಿ ಮುಂಬೈನ ಗ್ಯಾಂಗ್‌ಸ್ಟರ್ ಜತೆ ಲಕ್ನೋಗೆ ಪ್ರಯಾಣ ಬೆಳೆಸಿದ ಆರೋಪ ಹೀನಾ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News