ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಂಗಳಕ್ಕೆ ಸಿಜೆಐ ಪದಚ್ಯುತಿ ನೋಟಿಸ್

Update: 2018-04-21 05:55 GMT

ಹೊಸದಿಲ್ಲಿ, ಎ. 21: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪದಚ್ಯುತಿ ಪ್ರಕ್ರಿಯೆಗೆ ಅನುಮತಿ ಕೋರಿ ವಿರೋಧ ಪಕ್ಷಗಳ ಸದಸ್ಯರು ಸಲ್ಲಿಸಿದ ಅರ್ಜಿಯನ್ನು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಪರಿಶೀಲಿಸುತ್ತಿದ್ದು, ಇದನ್ನು ಸ್ವೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾನೂನಿನಲ್ಲಿ ಯಾವುದೇ ಸಮಯ ಮಿತಿ ನಿಗದಿಗೊಳಿಸಿಲ್ಲ. ಆದರೆ ಹಿಂದೆ ನ್ಯಾಯಾಧೀಶರ ವಿರುದ್ಧದ ವಾಗ್ದಂಡನೆ ಅರ್ಜಿ ಸಲ್ಲಿಸಿದಾಗ ಲೋಕಸಭೆ ಸ್ಪೀಕರ್/ ರಾಜ್ಯಸಭೆಯ ಸಭಾಪತಿ ಮೂರರಿಂದ 13 ದಿನಗಳವರೆಗೆ ಕಾಲಾವಕಾಶ ಪಡೆದಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

"ನೋಟಿಸ್ ಸಲ್ಲಿಸಿದ ಬಳಿಕ, ರಾಜ್ಯಸಭೆ ಕಚೇರಿ ಇದನ್ನು ಪರಿಶೀಲಿಸಿ, ಸಂಸದರ ಸಹಿಗಳನ್ನು ತಾಳೆ ಮಾಡುತ್ತದೆ. ಬಳಿಕ ಈ ನಿಲುವಳಿಯನ್ನು ಸ್ವೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ರಾಜ್ಯಸಭೆಯ ಸಭಾಪತಿ ಪಡೆಯುತ್ತಾರೆ. ಈ ಹಿಂದೆ ಇಂಥ ಅರ್ಜಿ ಸಲ್ಲಿಕೆಯಾದಾಗ ಸಿಜೆಐ ಅವರ ಅಭಿಪ್ರಾಯ ಪಡೆಯಲಾಗಿತ್ತು. ಆದರೆ ಈ ಬಾರಿ ಅವರ ವಿರುದ್ಧವೇ ಅರ್ಜಿ ಸಲ್ಲಿಕೆಯಾಗಿರುವುದರಿಂದ ಕಾನೂನು ತಜ್ಞರ ಅಭಿಮತ ಪಡೆಯಬೇಕಾಗಿದೆ ಎಂದು ತಿಳಿಸಿದರು.

ನಿಲುವಳಿ ಬಗೆಗಿನ ಸಭಾಪತಿ ನಿರ್ಧಾರವನ್ನು ಸದಸ್ಯರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾಯ್ ಹೇಳುತ್ತಾರೆ. ಇದೇ ಅಭಿಪ್ರಾಯವನ್ನು ರಾಜ್ಯಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ವಿವೇಕ್ ಕುಮಾರ್ ಅಗ್ನಿಹೋತ್ರಿ ಕೂಡಾ ವ್ಯಕ್ತಪಡಿಸಿದರು.

ಈ ಅರ್ಜಿಯನ್ನು ಉಪರಾಷ್ಟ್ರಪತಿ ಸ್ವೀಕರಿಸಿದರೆ, ವಾಗ್ದಂಡನೆ ನಿಲುವಳಿ ಪ್ರಕ್ರಿಯೆ ಆರಂಭವಾಗುತ್ತದೆ. ಅವರು ಮೂವರು ಸದಸ್ಯರ ತನಿಖಾ ಸಮಿತಿ ರಚಿಸುತ್ತಾರೆ. ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ, ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕಾನೂನು ತಜ್ಞರ ಸಮಿತಿ, ಸಿಜೆಐ ವಿರುದ್ಧದ ಆರೋಪವನ್ನು ಪರಿಶೀಲಿಸುತ್ತದೆ. ಬಳಿಕ ಸದನದಲ್ಲಿ ಚರ್ಚೆ ನಡೆದು ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ಎರಡೂ ಸದನಗಳಲ್ಲಿ ನಿರ್ಣಯದ ಪರವಾಗಿ ಮೂರನೇ ಎರಡರಷ್ಟು ಬಹುಮತ ಬಂದರೆ, ನಿರ್ಧಾರವನ್ನು ರಾಷ್ಟ್ರಪತಿಗೆ ಕಳುಹಿಸಲಾಗುತ್ತದೆ. ಅವರು ಅಂತಿಮವಾಗಿ ಪದಚ್ಯುತಿ ಆದೇಶ ಹೊರಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News