ವಿದ್ಯಾರ್ಥಿಗಳ ಕೊರತೆ: ಮುಚ್ಚುವ ಹಂತದಲ್ಲಿ 83 ಇಂಜಿನಿಯರಿಂಗ್ ಕಾಲೇಜುಗಳು

Update: 2018-04-21 18:30 GMT

ಹೊಸದಿಲ್ಲಿ, ಎ.21: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಹಲವು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಖಾಲಿಯಿವೆ. ಆದ್ದರಿಂದ ಹೊಸ ಶೈಕ್ಷಣಿಕ ವರ್ಷದಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಕೋರ್ಸ್‌ಗಳ ಪ್ರವೇಶಾವಕಾಶವನ್ನು ಸುಮಾರು 1.3 ಲಕ್ಷದಷ್ಟು ಕಡಿಮೆಗೊಳಿಸಬೇಕು ಎಂದು ಇಂಜಿನಿಯರಿಂಗ್ ಕಾಲೇಜುಗಳು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ)ಗೆ ಮನವಿ ಸಲ್ಲಿಸಿವೆ.

ಎಐಸಿಟಿಇ ಬಿಡುಗಡೆಗೊಳಿಸಿರುವ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಒಟ್ಟು 24,000 ಸೀಟುಗಳ ಪ್ರವೇಶಾವಕಾಶ ಹೊಂದಿರುವ 83 ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುಗಡೆಗೆ ಅರ್ಜಿ ಸಲ್ಲಿಸಿವೆ. ಇನ್ನೂ 494 ಕಾಲೇಜುಗಳು ಪದವಿ ಹಾಗೂ ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿಯ ಕೆಲವು ಕೋರ್ಸ್‌ಗಳನ್ನು ಕೈಬಿಡಲು ಅನುಮತಿ ಕೋರಿದ್ದು ಇದರಿಂದ ರಾಷ್ಟ್ರಮಟ್ಟದಲ್ಲಿ 42,000 ಪ್ರವೇಶಾವಕಾಶ ಕಡಿಮೆಯಾಗಲಿದೆ. ಅಲ್ಲದೆ 639 ಸಂಸ್ಥೆಗಳು ತಮಗಿರುವ ಪ್ರವೇಶಾವಕಾಶ ಅನುಮತಿಯನ್ನು (ಎಲ್ಲಾ ಸಂಸ್ಥೆಗಳೂ ಸೇರಿ) 62,000ಕ್ಕೆ ಇಳಿಸಲು ಅನುಮತಿ ಕೋರಿವೆ.

 ಈ ಎಲ್ಲಾ ಕೋರಿಕೆಯನ್ನು ಒಟ್ಟು ಸೇರಿಸಿದರೆ, ಬಿ.ಇ/ಬಿ.ಟೆಕ್, ಎಂ.ಇ/ಎಂ.ಟೆಕ್‌ನಲ್ಲಿ ಒಟ್ಟಾರೆ 1.3 ಲಕ್ಷ ಸೀಟುಗಳ ಕಡಿತವಾಗಬೇಕೆಂದು ಕೋರಿಕೆ ಸಲ್ಲಿಸಲಾಗಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಎಐಸಿಟಿಇ ತಿಳಿಸಿದ್ದು , ಮುಚ್ಚುಗಡೆ ಬಯಸಿರುವ ಕಾಲೇಜುಗಳ ಕೋರಿಕೆ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

 ಅಲ್ಲದೆ ಕೆಲವು ಆಯ್ದ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಆಂಶಿಕ ಅಥವಾ ಸಂಪೂರ್ಣ ಮುಕ್ತಾಯಗೊಳಿಸುವ ಕೋರಿಕೆಯ ಶೇ.80ರಷ್ಟಕ್ಕೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಈ ಕುರಿತ ಅಂತಿಮ ಅಂಕಿಅಂಶ ಮೇ ಪ್ರಥಮ ವಾರದಲ್ಲಿ ಲಭ್ಯವಾಗಲಿದೆ . ಅಲ್ಲದೆ ಕಳೆದ 5 ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಅತ್ಯಂತ ಕಳಪೆ ನಿರ್ವಹಣೆ ತೋರಿದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸಲಾಗುವುದು ಎಂದು ಎಐಸಿಟಿಇ ತಿಳಿಸಿದೆ. ಇಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಕೋರ್ಸ್‌ಗಳಿಗೆ ಕಳೆದ ಐದು ವರ್ಷಗಳಲ್ಲಿ ಸತತವಾಗಿ ವಿದ್ಯಾರ್ಥಿಗಳ ದಾಖಲಾತಿ ಶೇ.30ಕ್ಕಿಂತ ಕಡಿಮೆ ಇರುವ ಸಂಸ್ಥೆಗಳ ಪ್ರವೇಶಾವಕಾಶವನ್ನು ಈ ಶೈಕ್ಷಣಿಕ ವರ್ಷದಿಂದ ಶೇ.50ರಷ್ಟು ಕಡಿಮೆಗೊಳಿಸಲಾಗಿದೆ. ಅಲ್ಲದೆ ಶೂನ್ಯ ದಾಖಲಾತಿ ಇರುವ ಕೋರ್ಸ್‌ಗಳನ್ನು ತಕ್ಷಣ ಮುಕ್ತಾಯಗೊಳಿಸಲಾಗುವುದು ಎಂದು ಎಐಸಿಟಿಇ ಘೋಷಿಸಿದೆ.

 ಭಾರತದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಶೇ.70ರಷ್ಟು ಇಂಜಿನಿಯರಿಂಗ್ ಸೀಟುಗಳಿದ್ದರೆ, ಎಂಬಿಎ, ಫಾರ್ಮಸಿ, ಎಂಸಿಎ, ವಾಸ್ತುಶಿಲ್ಪ, ನಗರ ಯೋಜನೆ, ಹೋಟೆಲ್ ಮ್ಯಾನೇಜ್‌ಮೆಂಟ್, ಅನ್ವಯಿಕ ಕರಕುಶಲತೆ ಮತ್ತು ಕಲೆ - ಇವು ಒಟ್ಟು ಸೇರಿ ಶೇ.30ರಷ್ಟಾಗುತ್ತದೆ. 2016-17ರಲ್ಲಿ 3,291 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 15.5 ಲಕ್ಷ ಬಿ.ಇ/ಬಿ.ಟೆಕ್ ಸೀಟುಗಳಲ್ಲಿ ಶೇ.51ರಷ್ಟು ಭರ್ತಿಯಾಗಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಮೂಲಭೂತ ಸೌಕರ್ಯದ ಕೊರತೆ, ತರಗತಿ ಕೋಣೆಯಲ್ಲಿ ತಾಂತ್ರಿಕ ಪರಿಸರ ವ್ಯವಸ್ಥೆಯ ಅಲಭ್ಯತೆ ಮುಂತಾದ ಕಾರಣಗಳಿಂದ ಸೀಟುಗಳು ಭರ್ತಿಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕಾರಣದಿಂದಲೇ ಕಳಪೆ ದಾಖಲಾತಿಯನ್ನು ಹೊಂದಿರುವ ಸಂಸ್ಥೆಗಳ ಪ್ರವೇಶಾವಕಾಶವನ್ನು ಕಡಿಮೆಗೊಳಿಸಲು ಎಐಸಿಟಿಇ ನಿರ್ಧರಿಸಿದೆ.

  ಈ ವರ್ಷ ಹೊಸ ಸಂಸ್ಥೆ ಆರಂಭಿಸಲು ಅನುಮತಿ ಕೋರಿ 64 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಿಂದ 15,000 ಸೀಟುಗಳು ಹೆಚ್ಚುವರಿ ಲಭ್ಯವಾಗುವ ನಿರೀಕ್ಷೆಯಿದೆ. ಅಲ್ಲದೆ ಈಗ ಇರುವ 247 ಸಂಸ್ಥೆಗಳು ವಿಸ್ತರಣೆ ಕೋರಿದ್ದು, ಇದರಿಂದ ಸುಮಾರು 25,000 ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ ಎಂದು ಎಐಸಿಟಿಇ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News