ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ; ಕೇಂದ್ರ ಸರಕಾರದ ನಿರ್ಧಾರಕ್ಕೆ ರಾಷ್ಟ್ರಪತಿ ಅಂಕಿತ

Update: 2018-04-22 17:40 GMT

ಹೊಸದಿಲ್ಲಿ, ಎ. 22: ಹನ್ನೆರೆಡು ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವಿವಾರ ಸಹಿ ಹಾಕಿದ್ದಾರೆ. ಹನ್ನೆರಡು ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ನ್ಯಾಯಾಲಯಕ್ಕೆ ಅನುವು ಮಾಡಿ ಕೊಡುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಶನಿವಾರ ಅನುಮೋದನೆ ನೀಡಿತ್ತು.

ಅಪರಾಧ ಕಾಯ್ದೆ (ತಿದ್ದುಪಡಿ) ಸುಗ್ರೀವಾಜ್ಞೆ ಪ್ರಕಾರ ಇಂತಹ ಪ್ರಕರಣಗಳನ್ನು ನಿರ್ವಹಿಸಲು ನೂತನ ತ್ವರಿತ ವಿಚಾರಣಾ ನ್ಯಾಯಾಲಯ ರೂಪಿಸಲಾಗುವುದು ಹಾಗೂ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಗಳಿಗೆ ದೀರ್ಘಾವಧಿಯಲ್ಲಿ ವಿಶೇಷ ವಿಧಿವಿಜ್ಞಾನ ಪರೀಕ್ಷೆಯ ಕಿಟ್ ನೀಡಲಾಗುವುದು.

ನಿರ್ದಿಷ್ಟವಾಗಿ 12 ಹಾಗೂ 16 ವಯಸ್ಸಿನ ಕೆಳಗೆ ಇರುವ ಮಕ್ಕಳ ಅತ್ಯಾಚಾರ ಅಪರಾಧಿಗಳಿಗೆ ಈ ಕಾಯ್ದೆ ಕಠಿಣ ಶಿಕ್ಷೆ ವಿಧಿಸುತ್ತದೆ. 12 ವರ್ಷಕ್ಕಿಂತ ಕೆಳಗಿನ ಮಕ್ಕಳ ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಈ ಕಾಯ್ದೆ ತಿಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಕನಿಷ್ಠ ಶಿಕ್ಷೆಯನ್ನು 7 ವರ್ಷಗಳಿಂದ 10 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದನ್ನು ಜೀವಾವಧಿ ವರೆಗೆ ವಿಸ್ತರಿಸಬಹುದು. 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಕನಿಷ್ಠ ಶಿಕ್ಷೆಯನ್ನು 10 ವರ್ಷಗಳಿಂದ 20 ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಇದನ್ನು ಜೀವಾವಧಿ ವರೆಗೆ ವಿಸ್ತರಿಸಬಹುದು. 16 ವರ್ಷದ ಕೆಳಗಿನ ಮಕ್ಕಳ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಗಳಲ್ಲಿ ಅಪರಾಧಿಯ ಉಳಿದ ಜೀವಿತಾವಧಿಯ ವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದು. 12 ವರ್ಷಕ್ಕಿಂತ ಕೆಳಗಿನ ಮಕ್ಕಳ ಅತ್ಯಾಚಾರ ಪ್ರಕರಣದ ಅಪರಾಧಿಗೆ ಕನಿಷ್ಠ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದು. ಇದನ್ನು ಜೀವಾವಧಿ ಕಾರಾಗೃಹ ಅಥವಾ ಮರಣದಂಡನೆ ವರೆಗೆ ಕೂಡ ವಿಸ್ತರಿಸಬಹುದು.

ಇದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ), ಸಾಕ್ಷ ಸಂರಕ್ಷಣಾ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತರಲಾಗುವುದು.

ತನಿಖೆ ಹಾಗೂ ವಿಚಾರಣೆ ತ್ವರಿತವಾಗಿ ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ಲ ಅತ್ಯಾಚಾರ ಪ್ರಕರಣಗಳ ತನಿಖೆಗೆ ಕಡ್ಡಾಯವಾಗಿ ಎರಡು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅತ್ಯಾಚಾರ ಪ್ರಕರಣಗಳ ವಿಚಾರಣೆ ಎರಡು ತಿಂಗಳ ಒಳಗೆ ಪೂರ್ಣಗೊಳ್ಳಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಮೇಲ್ಮನವಿಯ ವಿಲೇವಾರಿಗೆ ಆರು ತಿಂಗಳ ಸಮಯ ಮಿತಿ ಸೂಚಿಸಲಾಗಿದೆ.

ಈ ಕಾಯ್ದೆಯಲ್ಲಿ 16 ವರ್ಷದ ಕೆಳಗಿನ ಬಾಲಕಿಯ ಅತ್ಯಾಚಾರ ಎಸಗಿದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡುವ ಅವಕಾಶವೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News