ಮತದಾನ ನೋಂದಣಿ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 31 ಮಂದಿ ಮೃತ್ಯು

Update: 2018-04-22 17:52 GMT

ಕಾಬೂಲ್,ಎ.22: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಹೊರವಲಯ ದಲ್ಲಿರುವ ಮತದಾರರ ನೋಂದಣಿ ಕೇಂದ್ರದಲ್ಲಿ ನಡೆದ ಆತ್ಮಹತ್ಯಾಬಾಂಬ್ ದಾಳಿಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದಾರೆ ಹಾಗೂ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ಅಕ್ಟೋಬರ್ 20ರಂದು ನಡೆಯಲಿರುವ ಶಾಸನಸಭೆ ಚುನಾವಣೆಗಳಿಗೆ ಅಫ್ಘಾನಿಸ್ತಾನ ಭರದ ಸಿದ್ಧತೆ ನಡೆಸುತ್ತಿರುವಂತೆಯೇ, ಈ ಭೀಕರ ಬಾಂಬ್ ದಾಳಿ ನಡೆದಿರುವುದು ಭದ್ರತೆಯ ಕುರಿತ ಆತಂಕವನ್ನು ಇಮ್ಮಡಿಗೊಳಿಸಿದೆಯೆಂದು ವರದಿಗಳು ತಿಳಿಸಿವೆ.

 ಶಾಸಕಾಂಗ ಚುನಾವಣೆಯು ಮುಂದಿನ ವರ್ಷ ನಡೆಯಲಿರುವ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆಯ ತಾಲೀಮು ಎಂದೇ ಪರಿಗಣಿಸಲಾಗಿದೆ. ಈ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಉಗ್ರಗಾಮಿ ಗುಂಪು ವಹಿಸಿಕೊಂಡಿಲ್ಲವಾದರೂ, ಇದರ ಹಿಂದೆ ಐಸಿಸ್ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಶಿಯಾ ಸಮುದಾಯದವರು ಅಧಿಕಸಂಖ್ಯೆಯಲ್ಲಿರುವ ಕಾಬೂಲ್‌ನ ಪಶ್ಚಿಮ ಭಾಗದ ಪ್ರದೇಶದಲ್ಲಿರುವ ಮತದಾರ ನೋಂದಣಿಕೇಂದ್ರದ ಮುಂದೆ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮತದಾರರ ಗುರುತುಚೀಟಿಗಾಗಿ ತಮ್ಮನ್ನು ನೋಂದಾಯಿಸಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾಗ ಈ ದಾಳಿ ನಡೆದಿದೆ. ನೋಂದಣಿ ಕೇಂದ್ರದ ಸಮೀಪದ ರಸ್ತೆಯಲ್ಲಿ ಗಾಜಿನ ಚೂರುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯವನ್ನು ಏರಿಯಾನಾ ಟಿವಿ ವಾಹಿನಿ ಪ್ರದರ್ಶಿಸಿದೆ.

ಸ್ಫೋಟ ನಡೆದ ಸ್ಥಳದಲ್ಲಿ ಹಲವಾರು ಮೃತದೇಹಗಳು ಚದುರಿಬಿದ್ದಿರುವುದನ್ನು ಹಾಗೂ ತೀವ್ರವಾಗಿ ಹಾನಿಗೀಡಾಗಿರುವ ಎರಡು ಮಹಡಿಗಳ ಕಟ್ಟಡದ ದೃಶ್ಯವಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ.

ದೀರ್ಘ ಸಮಯದಿಂದ ವಿಳಂಬಗೊಂಡಿರುವ ಶಾಸಕಾಂಗ ಚುನಾವಣೆಗಳಿಗಾಗಿ ಮತದಾರರ ನೋಂದಣಿ ಕೆಲಸವನ್ನು ಅಫ್ಘಾನಿಸ್ತಾನವು ಎಪ್ರಿಲ್ 14ರಿಂದ ಆರಂಭಿಸಿದೆ.

ತಾಲಿಬಾನ್ ಮತ್ತಿತರ ಬಂಡುಕೋರ ಗುಂಪುಗಳ ದೇಶದ ವಿಶಾಲ ಭೂಭಾಗದ ಮೇಲೆ ನಿಯಂತ್ರಣ ಹೊಂದಿರುವುದರಿಂದ, ಚುನಾವಣೆಯ ವೇಳೆ ಮತದಾರರಿಗೆ ಭದ್ರತೆಯನ್ನು ಒದಗಿಸುವುದು ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

 ಶಂಕಿತ ಉಗ್ರರು ಶುಕ್ರವಾರ ವಾಯವ್ಯ ಬಾಡ್ಗಿಸ್ ಪ್ರಾಂತದಲ್ಲಿರುವ ಮತದಾರರ ನೋಂದಣಿ ಕೇಂದ್ರದ ಮೇಲೆ ರಾಕೆಟ್ ದಾಳಿಯನ್ನು ನಡೆಸಿದ್ದು, ಕನಿಷ್ಠ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದು, ಇನ್ನೊಬ್ಬಾತ ಗಾಯಗೊಂಡಿದ್ದಾನೆ.

 ಮಂಗಳವಾರದಂದು ಬಂದೂಕುಧಾರಿಯೊಬ್ಬಾತ ಕೇಂದ್ರ ಗೋರ್ ಪ್ರಾಂತದಲ್ಲಿರುವ ಮತದಾರರ ನೋಂದಣಿ ಕೇಂದ್ರದ ಮೇಲೆ ದಾಳಿ ನಡೆಸಿ, ಮೂವರು ಚುನಾವಣಾ ಕಾರ್ಯಕರ್ತರನ್ನು ಹಾಗೂ ಇಬ್ಬರು ಪೊಲೀಸರನ್ನು ಅಪಹರಿಸಿದ್ದರು. ಗುರುವಾರದಂದು ತಾಲಿಬಾನ್ ಅಪಹೃತರನ್ನು ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News