ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ವಿಧಿಸುವ ಕಾನೂನು ಜಾರಿ ಸ್ವಾಗತಾರ್ಹ: ಮಲ್ಲಿಕಾರ್ಜುನ್ ಖರ್ಗೆ

Update: 2018-04-22 14:49 GMT

ಬೆಂಗಳೂರು, ಎ.22: ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವುದನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದು, ಕಾನೂನು ಮಾಡುವುದಕ್ಕಿಂತ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಿರ್ಭಯ ಕಾನೂನು ಇದೆ. ಯಾವುದೇ ಕಾನೂನು ಮಾಡಲು ಅದಕ್ಕೆ ನಮ್ಮ ಬೆಂಬಲ ಇದೆ. ಆದರೆ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾದಾಗ ಮಾತ್ರ ಅದಕ್ಕೊಂದು ಅರ್ಥ ಇರುತ್ತದೆ ಎಂದರು.

ಅಪರಾಧಕ್ಕೆ ಸಂಬಂಧಿಸಿದಂತೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಕಾರಣ ದೇಶದಲ್ಲಿ ಶೇ.500ರಷ್ಟು ಮ್ಕಕಳು, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದರು.

ಯಾರನ್ನೋ ತೃಪ್ತಿಪಡಿಸಲು, ಚಪ್ಪಾಳೆ ಗಿಟ್ಟಿಸಲು ಕಾನೂನು ಮಾಡಿದರೆ ಸಾಲದು. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೇಂದ್ರ ಸರಕಾರ ಆ ಕೆಲಸ ಮಾಡಿಲ್ಲ. ಮೋದಿ ಸರಕಾರ ನಿಷ್ಪ್ರಯೋಜಕ ಎಂದು ಟೀಕಿಸಿದರು.

ನೋಟು ಅಮಾನ್ಯದಿಂದ ದೇಶದ ಆರ್ಥಿಕ ವ್ಯವಸ್ಥೆಯೂ ಹಾಳಾಗಿ ಹೋಯಿತು. ಎಟಿಎಂಗಳಲ್ಲಿ ಹಣ ಇಲ್ಲ. ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಜನ ಅಲೆದಾಡುವಂತಾಗಿದೆ. ಮೋದಿ ಅವರ ತಪ್ಪುತೀರ್ಮಾನದಿಂದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ದಲಿತರ ಮೇಲೆ ದೌರ್ಜನ್ಯಗಳು ಮೀತಿ ಮೀರಿವೆ. ಯಾವುದರ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡುವುದಿಲ್ಲ ಎಂದು ಹರಿಹಾಯ್ದರು. ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಾಲ ಮನ್ನಾ ಮಾಡಲಿಲ್ಲ. ಅದು ಬಿಟ್ಟು ಕೈಗಾರಿಕೋದ್ಯಮಗಳಿಗೆ 2 ಲಕ್ಷ ಕೋಟಿ ರೂ. ಗೂ ಹೆಚ್ಚು ಬ್ಯಾಂಕ್ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಿತು. ಇದು ಇವರ ರೈತಪರ ಕಾಳಜಿ ಎಂದು ದೂರಿದರು.

ಪ್ರಧಾನಿ ಮೋದಿ ಅವರದ್ದು ಬರೀ ಮಾತು. ಅದು ಬಿಟ್ಟರೆ ವಿದೇಶ ಪ್ರವಾಸ. ಇನ್ನೆನೂ ಇಲ್ಲ. ದೇಶದಲ್ಲೇ ಸಾಕಷ್ಟು ಸಮಸ್ಯೆಗಳಿದ್ದರೂ ವಿದೇಶ ಪ್ರವಾಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಿವರ್ಷ 2 ಲಕ್ಷ ಕೋಟಿ ಉದ್ಯೋಗ ನೀಡುತ್ತೇವೆ ಎಂದು ನೀಡಿದ್ದ ಭರವಸೆ ಈಡೇರಿಲ್ಲ. ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿ ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಮೋದಿ ಹೇಳಿದ್ದರು. ಅದೂ ಅನುಷ್ಠಾನಗೊಂಡಿಲ್ಲ. ಈಗ ಲೋಕಸಭಾ ಚುನಾವಣೆ ಬರುತ್ತಿದೆ. ಕನಿಷ್ಠ ಮೊದಲ ಕಂತಾಗಿ ಏಳೂವರೆ ಲಕ್ಷ ರೂ.ಗಳನ್ನು ಪ್ರತಿ ಜನರ ಖಾತೆಗೆ ಹಾಕಲಿ ಎಂದು ವ್ಯಂಗ್ಯವಾಡಿದರು.

ಸಂಸತ್‌ನಲ್ಲಿ ವಿಶ್ವಾಸ ಮತ ಚರ್ಚೆಗೆ ಅವಕಾಶ ಕೊಡದೆ ಎನ್‌ಡಿಎ ಅಂಗ ಪಕ್ಷಗಳಿಂದ ಗದ್ದಲ ನಡೆಸುವಂತೆ ಹುನ್ನಾರ ನಡೆಸಿ ಸಂಸತ್ ನಡೆಯಲು ಅಡ್ಡಿಯಾದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮೇಲೆ ಆರೋಪ ಹೊರಿಸುತ್ತಾರೆ, ಉಪವಾಸದ ನಾಟಕವಾಡುತ್ತಾರೆ ಎಂದು ಟೀಕಿಸಿದರು.

ಯಾವುದೇ ವಿಚಾರದ ಬಗ್ಗೆಯೂ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಅವರು ಸಂಸತ್ ಅಧಿವೇಶನ ನಡೆಸಲು ಮುಂದಾಗಲಿಲ್ಲ. ಅವರು ಯಾವುದೇ ವಿಚಾರದ ಬಗ್ಗೆಯೂ ಎಲ್ಲೂ ಮಾತನಾಡುವುದಿಲ್ಲ. ಈಗಾದರೇ ಹೇಗೆ, ಇಂತಹ ಕೆಟ್ಟ ಸರಕಾರವನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ದೂರಿದರು.

ಬ್ಯಾಂಕ್‌ಗಳಲ್ಲಿ ಜನ ಹಣ ಠೇವಣಿ ಇಡುತ್ತಿಲ್ಲ. ಇಟ್ಟ ಹಣವನ್ನು ನೀರವ್ ಮೋದಿ, ಮಲ್ಯ, ಲಲಿತ್ ಮೋದಿಯಂತಹ ಉದ್ಯಮಿಗಳು ವಿದೇಶಕ್ಕೆ ತೆಗೆದುಕೊಂಡು ಪರಾರಿಯಾಗುತ್ತಾರೆ. ರೈತರಿಗೆ ಮಕ್ಕಳ ಮದುವೆ ಮಾಡಲು ಬ್ಯಾಂಕ್‌ನಿಂದ ಹಣ ತೆಗೆಯದಂತಹ ಪರಿಸ್ಥಿತಿಗೆ ಬ್ಯಾಂಕಿಂಗ್ ವ್ಯವಸ್ಥೆ ಬಂದು ನಿಂತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥೆ ಪ್ರಿಯಾಂಕ ಚತುರ್ವೇದಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌ಗುಂಡೂರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News