ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿಗೆ ಆಗ್ರಹ

Update: 2018-04-22 15:15 GMT

ಬೆಂಗಳೂರು, ಎ.22: ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲೆ, ಉತ್ತರಪ್ರದೇಶ ಉನ್ನಾವ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜವೇ ತಲೆ ತಗ್ಗಿಸುವಂತದ್ದು ಎಂದು ಟೀಂ ಸುಲ್ತಾನ್ ಫೌಂಡೇಷನ್ ಟ್ರಸ್ಟ್‌ನ ಉಪಾಧ್ಯಕ್ಷ ಮುಹಮ್ಮದ್ ಸುಹೇಲ್ ಹೇಳಿದ್ದಾರೆ.

ರವಿವಾರ ಇಲ್ಲಿನ ರಾಮಮೂರ್ತಿನಗರ ವಾರ್ಡ್‌ನ ಕೌದೇನಹಳ್ಳಿಯಲ್ಲಿ ಮುಗ್ಧ ಕಂದಮ್ಮಗಳು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ವಿರುದ್ಧ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದೋರ್‌ನ ರಾಜವಾಡ ಕೋಟೆ ಬಳಿ ಎಂಟು ತಿಂಗಳ ಹಸುಳೆ, ಛತ್ತೀಸ್‌ಗಡದ ರಾಜಧಾನಿ ರಾಯಪುರ ಹಾಗೂ ಅಸ್ಸಾಂನ ತಿನ್‌ಸುಕಿಯಾದ ಲಾಜೋಂಗ್ ಗ್ರಾಮದಲ್ಲಿ 7 ವರ್ಷದ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ವರದಿಯಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಇಡೀ ದೇಶಕ್ಕೆ ಅನ್ವಯವಾಗುವಂತೆ ಅತ್ಯಂತ ಕಠಿಣವಾದ ಕಾನೂನು ಜಾರಿಗೆ ತಂದು, ಅತ್ಯಾಚಾರ ಮಾಡುವವರಿಗೆ ಮರಣ ದಂಡನೆ ವಿಧಿಸಬೇಕು. ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಮುಹಮ್ಮದ್ ಸುಹೇಲ್ ಒತ್ತಾಯಿಸಿದರು.

ಸಾರ್ವಜನಿಕರಿಂದ ಈ ಸಂಬಂಧ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈಗಾಗಲೆ ಸಾವಿರಾರು ಜನರಿಂದ ಸಹಿಗಳನ್ನು ಸಂಗ್ರಹಿಸಿದ್ದೇವೆ. ನಮ್ಮ ಬೇಡಿಕೆಯೊಂದಿಗೆ ಈ ಸಹಿಗಳನ್ನು ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಟೀಂ ಸುಲ್ತಾನ್ ಫೌಂಡೇಷನ್ ಟ್ರಸ್ಟ್‌ನ ಪದಾಧಿಕಾರಿಗಳಾದ ನೂರುಲ್ಲಾ, ಸೈಯ್ಯದ್ ಝಹೀರ್, ಸಂಜೀತ್‌ಕುಮಾರ್, ಆಫ್ತಾಬ್ ಶರೀಫ್, ಚಾಂದ್‌ಪಾಷ, ಹಿದಾಯತ್, ಮುಬಾರಕ್, ಫೌಝಿಲ್ ಪಾಷ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News