ಮೋದಿ ಸರಕಾರ, ಆರೆಸ್ಸೆಸ್ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿವೆ: ಅಸ್ಸಾಂ ಮಾಜಿ ಸಿ.ಎಂ ತರುಣ್ ಗೋಗಾಯ್

Update: 2018-04-22 15:28 GMT

ಬೆಂಗಳೂರು, ಎ.22: ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಆರೆಸ್ಸೆಸ್ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಹೀಗಾಗಿ, ಅಲ್ಪಸಂಖ್ಯಾತರಿಗೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೋಗಾಯ್ ಆರೋಪಿಸಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಹಾಗೂ ಆರೆಸ್ಸೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕದ ವಾತಾವರಣ ಸಷ್ಟಿಯಾಗುತ್ತಿದ್ದು, ನ್ಯಾಯಾಂಗ ಮೇಲೆ ಜನತೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ವಿಷಮ ಸನ್ನಿವೇಶದಲ್ಲಿ ಜನರು ಬುದ್ಧಿವಂತರಾಗಬೇಕಿದೆ ಎಂದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ದೇಶದಲ್ಲಿಯೇ ಉತ್ತಮ ಆಡಳಿತ ಕರ್ನಾಟಕದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯನವರನ್ನು ದೂರುವ ಪಕ್ಷಗಳಿಗೆ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಬೇಕಿದೆ ಎಂದು ತರುಣ್ ಗೋಗಾಯ್ ರಾಜ್ಯದ ಜನತೆಗೆ ಕರೆ ನೀಡಿದರು.

ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಮಾತನಾಡಿ, ಕೇಂದ್ರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗದೇ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಗೂಂಡಾಗಳ ರಾಜ್ಯವಾಗಿ ಮಾರ್ಪಾಡಾಗಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಬಿಜೆಪಿಗರು ಸುಳ್ಳಿನಲ್ಲಿ ನಿಸ್ಸೀಮರು: ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ನಾಯಕರು ಸುಳ್ಳು ಹೇಳುತ್ತಾ ಅಧಿಕಾರ ಅನುಭವಿಸುತ್ತಿದ್ದಾರೆಯೇ ಹೊರತು, ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿದೆ. ಇನ್ನು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ರಾಜ್ ಬಬ್ಬರ್ ಆರೋಪಿಸಿದರು.

ಕರ್ನಾಟಕಕ್ಕೆ ಸೆಲ್ಯೂಟ್: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಉತ್ತಮ ಆಡಳಿತ ನಡೆಸಿದೆ. ಹೀಗಾಗಿ, ರಾಜ್ಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೇ, ಕಾವೇರಿ ವಿಚಾರದಲ್ಲಿಯೂ ರಾಜ್ಯ ಹೋರಾಟ ನಡೆಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀರಿಗಾಗಿ ಹೋರಾಟ ನಡೆಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದು ಶ್ಲಾಘಿಸಿದ ಅವರು, ಮೋದಿ ನೇತೃತ್ವದ ಕೇಂದ್ರ ಸರಕಾರ ಮಹದಾಯಿ ವಿಚಾರದಲ್ಲಿ ನಾಟಕವಾಡುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರಕಾರದ ಅಭಿವೃದ್ದಿ ಅಭಿವೃದ್ದಿ ಕಾರ್ಯಗಳನ್ನು ಜನತೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ನಾನು ಸೆಲ್ಯೂಟ್ ಹೊಡೆಯುತ್ತೇನೆ ಎಂದ ಅವರು ಜನತೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಆರಿಸಬೇಕೆಂದು ರಾಜ್ ಬಬ್ಬರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News