ಸಂತೋಷವಾಗಿ ಬದುಕುವುದನ್ನು ಕಲಿಯಿರಿ: ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ

Update: 2018-04-22 15:34 GMT

ಬೆಂಗಳೂರು, ಎ.22: ಹಾಸ್ಯ ಒಂದರಿಂದಲೇ ಒತ್ತಡ ಕಡಿಮೆಯಾಗದು. ಹೀಗಾಗಿ, ಮೊದಲು ಸಂತೋಷವಾಗಿ ಬದುಕುವುದನ್ನು ಕಲಿಯಿರಿ ಎಂದು ರಂಗಕರ್ಮಿ, ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ ಅಭಿಪ್ರಾಯಪಟ್ಟರು.

ರವಿವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಹಾಗೂ ಹಾಸ್ಯ ದರ್ಶನ(ಮಾಸ ಪತ್ರಿಕೆ)ವತಿಯಿಂದ ಆಯೋಜಿಸಿದ್ದ, ಬೀಚಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ , ಸಾಹಿತಿ ಕೋ.ಲ.ರಂಗನಾಥರಾವ ಅವರ ಸಂಪಾದಕತ್ವದ ನಗು-ಅಳು ಮತ್ತು ಕವಿಯ ಕನಸು, ಕನ್ನಡದ ತೇರು(ಕವನ-ಕಥಾಸಂಕಲನ) ಹಾಗೂ ಡಾ.ಸಿ.ಆರ್.ಪಾರ್ಥಸಾರಥಿ ಅವರ ‘ನೀರುತ್ತರ’ (ಕಾದಂಬರಿ) ಸು.ವಿ.ಮೂರ್ತಿ ಅವರ ‘ಮೆಲುಕು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬದುಕು ಸರಳವೂ ಸುಂದರವೂ ಆಗಬೇಕು ಎಂದರೆ ಹಾಸ್ಯ ಇರಬೇಕು ಎಂದ ಅವರು, ಎಲ್ಲರಲ್ಲೂ ಒಳ್ಳೆಯದನ್ನು ಗುರುತಿಸಬೇಕು. ಆಗ ಸಂತೋಷ ಉಕ್ಕಿ ಬರುತ್ತದೆ. ತನಗೆ ತಾನೇ ಬೇಸರ ಕಡಿಮೆಯಾಗಿ, ಒತ್ತಡವೂ ಜಾರಿಹೋಗುತ್ತದೆ. ನಾನೊಬ್ಬನೇ ಕಷ್ಟಪಟ್ಟೆ, ನನ್ನಿಂದಲೇ ಸಮಾಜ ನಡೆಯುತ್ತಿದೆ ಎಂದೆಲ್ಲಾ ಯೋಚಿಸಲೇಬಾರದು ಎಂದು ನುಡಿದರು.

ನನ್ನ ಶ್ರಮವೇನೂ ಇಲ್ಲ, ನನಗೆ ಒಳ್ಳೆಯ ಗಮನಿಸುವಿಕೆಯಿದೆ. ಅದು ನನ್ನ ಶಕ್ತಿ. ನಾನು ಕೆಲಕಾಲ ಮಾತನಾಡಿದರೆ, ಕೇಳುವವರು ಚಿಂತೆ ಮರೆಯಬೇಕು ಎಂಬ ಆಸೆ ನನ್ನದು. ಹಾಸ್ಯ ಎಲ್ಲರಲ್ಲೂ ಇರುತ್ತದೆ. ಅದನ್ನು ಎಲ್ಲರೂ ಒಪ್ಪುವುದಿಲ್ಲ. ನಮ್ಮಲ್ಲಿರುವ ಹಾಸ್ಯವನ್ನು ಇತರರಿಗೂ ಹಂಚಬೇಕೆಂದು ಯಶವಂತ ಸರದೇಶಪಾಂಡೆ ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಕಲಾ ಸಂಸ್ಥೆಯ ಅಧ್ಯಕ್ಷ ರಂಗನಾಥರಾವ, ಸಾಹಿತಿ ಶ್ರೀನಿವಾಸ ಕುಂಡಂತಾಯ, ಶ್ರೀಧರ ರಾಯಸಂ, ಎಸ್.ಎಸ್.ಪಡಶೆಟ್ಟಿ, ರೇವಣಸಿದ್ಧ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News