ಧರ್ಮವನ್ನು ಶತ್ರುವಂತೆ ನೋಡುವುದು ಬೇಡ: ಸಾಹಿತಿ ಗಣೇಶಯ್ಯ

Update: 2018-04-22 15:40 GMT

ಬೆಂಗಳೂರು, ಎ.22: ಧರ್ಮವನ್ನು ಶತ್ರುವಿನ ರೀತಿಯಲ್ಲಿ ನೋಡುತ್ತಾ ಧರ್ಮವನ್ನು ವೈಯಕ್ತಿಕವಾಗಿ ಒಡೆಯಲು ಪ್ರಯತ್ನಿಸುತ್ತಿರುವುದು ಸಮಾಜದ ದುರಂತ ಎಂದು ಸಾಹಿತಿ ಕೆ.ಎನ್.ಗಣೇಶಯ್ಯ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಸಾಹಿತಿ ಜಯಂತ ಕಾಯ್ಕಿಣಿ ಅವರ ಗುಲ್ ಮೊಹರ್ ಹಾಗೂ ರೂಪಾಂತರಿಸಿದ ನಾಟಕಗಳು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮವನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಆದರೆ, ಧರ್ಮದಲ್ಲಿ ಸೂಕ್ಷ್ಮತೆಗಳನ್ನು ಪ್ರಶ್ನೆ ಮಾಡುವ ಹಾಗೂ ಪ್ರಯೋಗ ಮಾಡುವ ಅವಕಾಶವೂ ಇದೆ ಎಂದರು.

ವಿಜ್ಞಾನದಲ್ಲಿ ಸಿಗದಿರುವ ಸಂತೋಷ ಹಾಗೂ ಖಾಲಿತನವನ್ನು ತುಂಬಿಕೊಳ್ಳುವ ಉದ್ದೇಶದಿಂದ ಹೃದಯಸ್ಪರ್ಶಿ ವ್ಯಕ್ತಿಗಳು ಸಾಹಿತ್ಯದ ಕಡೆಗೆ ಮುಖ ಮಾಡುತ್ತಿದ್ದಾರೆ. ಸಸ್ಯಶಾಸ್ತ್ರಜ್ಞ ಬಿ.ಜಿ.ಎಲ್.ಸ್ವಾಮಿ, ಜೀವ ರಸಾಯನಶಾಸ್ತ್ರದಲ್ಲಿ ಕೆಲಸ ಮಾಡುತ್ತಿದ್ದ ಜಯಂತ ಕಾಯ್ಕಿಣಿ, ತಂತ್ರಜ್ಞಾನ ಕ್ಷೇತ್ರದ ವಸುಧೇಂದ್ರ ಸೇರಿದಂತೆ ಅನೇಕರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಯಂತ್ ಕಾಯ್ಕಿಣಿ ಪದಗಳ ಹಾವಾಡಿಗ. ಸಾಧಾರಣ ಪದಗಳನ್ನು ತೆಗೆದುಕೊಂಡು ಬೆಳೆಸಿ, ಪಳಗಿಸುವ ಮೂಲಕ ಅತ್ಯುತ್ತಮ ಸಾಹಿತ್ಯವನ್ನು ನಮಗೆ ನೀಡುತ್ತಾರೆ. ಜೊತೆಗೆ ಸರಳ ಪದಗಳಲ್ಲಿರುವ ಸೌಂದರ್ಯವನ್ನು ತೆರೆದಿಡುವ ಶಕ್ತಿ ಅವರಿಗೆ ಸಿದ್ದಿಸಿದೆ ಎಂದು ಅವರು ಅಭಿಪ್ರಾಯಿಸಿದರು.

ಕನ್ನಡ ಕೀಲಿಮಣಿ ರೂವಾರಿ ಕೆ.ಪಿ.ರಾವ್ ಮಾತನಾಡಿ, ಅಕ್ಷರಗಳಿಗೆ ಅಮರತ್ವ ಇದೆ. ಆದರೆ, ಭಾಷೆಗೆ ಅಮರತ್ವ ಇಲ್ಲ. ಸಂಕೇತ ಅಥವಾ ಅಕ್ಷರಗಳ ರೂಪದಲ್ಲಿ ಬರೆದಿಟ್ಟರೆ ಸಾವಿರಾರು ವರ್ಷಗಳವರೆಗೆ ಇರುತ್ತದೆ. ವ್ಯಕ್ತಿ ಸತ್ತರೂ, ಅಕ್ಷರಗಳು ಹಾಗೆಯೇ ಇರುತ್ತವೆ ಎಂದು ಹೇಳಿದರು.

ನನಗೆ ಅಕ್ಷರಗಳನ್ನು ಯಾರೂ ಕಲಿಸಿಲ್ಲ. ನಾನೇ ಕಲಿತಿದ್ದೇನೆ. ಚಿಕ್ಕಂದಿನಿಂದಲೇ ಅಕ್ಷರಗಳ ಮೇಲೆ ಹುಚ್ಚು ಹಿಡಿದಿತ್ತು. ಉರ್ದು ಭಾಷೆ ಕಲಿಯುವ ವೇಳೆ ಲಿಪಿಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸುವುದನ್ನು ಕಲಿತೆ. ಅವುಗಳ ವೈವಿಧ್ಯವನ್ನು ಅರ್ಥ ಮಾಡಿಕೊಂಡೆ. ದಕ್ಷಿಣ ಭಾರತದ ಪದಗಳು ಬ್ರಾಹ್ಮಿ ಮೂಲದಿಂದ ಬಂದದ್ದು ಎಂದು ಹೇಳಿದರು.

ಮನುಷ್ಯನ ಯಾತನೆಯನ್ನು ಅರ್ಥಮಾಡಿಕೊಂಡು ಬರೆಯುವುದೇ ಒಂದು ಕಲೆ. ಇಬ್ಬರು ಕವಿಗಳ ನಡುವಿನ ಭೇಟಿ ಮತ್ತು ಮಾತುಕಥೆಯನ್ನು ಗುಲ್‌ಮೊಹರ್ ಪುಸ್ತಕ ಒಳಗೊಂಡಿದೆ. ಆಂಗ್ಲ ಭಾಷೆಯ 3ಸಂಗೀತ ನಾಟಕಗಳನ್ನು ಅನುವಾದಿಸಿ ಪ್ರಕಟಿಸಿದ ಪುಸ್ತಕವೇ ಜಯಂತ ಕಾಯ್ಕಿಣಿ ರೂಪಾಂತರಿಸಿದ ನಾಟಕಗಳು. ಈ ಪುಸ್ತಕ ರಚನೆಯಲ್ಲಿ ಹಲವರ ಸಹಕಾರವಿದ್ದು, ಪ್ರತಿಯೊಂದು ಹಂತದಲ್ಲಿಯೂ ಕೆ.ಪಿ.ರಾವ್ ಸಲಹೆ ನೀಡಿದ್ದಾರೆ.
- ಜಯಂತ ಕಾಯ್ಕಿಣಿ, ಸಾಹಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News