ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಮುಕ್ತ ಕಾರಾಗೃಹಕ್ಕೆ ವರ್ಗಾವಣೆ

Update: 2018-04-22 15:44 GMT

ಹೊಸದಿಲ್ಲಿ,ಎ.22: ಮಾಡೆಲ್ ಜೆಸ್ಸಿಕಾ ಲಾಲ್ ಹತ್ಯೆಗಾಗಿ ದಿಲ್ಲಿಯ ತಿಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಸಿದ್ಧಾರ್ಥ ವಶಿಷ್ಟ ಅಲಿಯಾಸ್ ಮನು ಶರ್ಮಾ(41)ನನ್ನು ಆತನ ‘ಒಳ್ಳೆಯ ನಡತೆ’ಗೆ ಬಳುವಳಿ ಯಾಗಿ ಮೂರು ತಿಂಗಳ ಹಿಂದೆ ಮುಕ್ತ ಕಾರಾಗೃಹಕ್ಕೆ ವರ್ಗಾಯಿಸಲಾಗಿದ್ದು, ದುಡಿಮೆಗಾಗಿ ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಜೈಲಿನಿಂದ ಹೊರಬೀಳುವ ಆತ ಸಂಜೆ ಆರು ಗಂಟೆಗೆ ವಾಪಸಾಗುತ್ತಿದ್ದಾನೆ. ಸುಮಾರು 15,000 ಕೈದಿಗಳಿರುವ ತಿಹಾರ ಜೈಲಿನಲ್ಲಿಯ ಇತರ ಐವರು ಕೈದಿಗಳಿಗೂ ಈ ಬಳುವಳಿ ಲಭಿಸಿದೆ.

ಶರ್ಮಾನನ್ನು ಮುಕ್ತ ಕಾರಾಗೃಹಕ್ಕೆ ವರ್ಗಾಯಿಸಿರುವುದು ಆತನ ಬಿಡುಗಡೆಯ ಪೂರ್ವಭಾವಿ ಕ್ರಮ ಎಂದು ಜೈಲಿನ ಹಲವಾರು ಅಧಿಕಾರಿಗಳು ಪರಿಗಣಿಸಿದ್ದಾರೆ. ಜೆಸ್ಸಿಕಾ ಹತ್ಯೆಗಾಗಿ 2006,ಡಿಸೆಂಬರ್‌ನಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾದ ಬಳಿಕ ಆತ 12 ವರ್ಷಗಳಿಗೂ ಅಧಿಕ ಸಮಯದಿಂದ ಜೈಲುವಾಸಿಯಾಗಿದ್ದಾನೆ. ದಿಲ್ಲಿ ಪೊಲೀಸರು ತನ್ನನ್ನು ಬಂಧಿಸಿದಾಗಿನಿಂದ ಕನಿಷ್ಠ 15 ವರ್ಷಗಳನ್ನು ಆತ ಜೈಲಿನಲ್ಲಿ ಕಳೆದಿದ್ದಾನೆ. ಕಾಂಗ್ರೆಸ್ ರಾಜಕಾರಣಿ ಹಾಗೂ ಮಾಜಿ ಸಚಿವ ವಿನೋದ್ ಶರ್ಮಾ ಅವರ ಪುತ್ರನಾಗಿರುವ ಮನು ಶರ್ಮಾ 1999 ಎಪ್ರಿಲ್‌ನಲ್ಲಿ ಖಾಸಗಿ ಪಾರ್ಟಿಯೊಂದರಲ್ಲಿ ಅನಧಿಕೃತ ಬಾರ್ ನಿರ್ವಹಿಸುತ್ತಿದ್ದ ಜೆಸ್ಸಿಕಾ ಮಧ್ಯರಾತ್ರಿಯ ಬಳಿಕ ತನಗೆ ಮದ್ಯ ನೀಡಲು ನಿರಾಕರಿಸಿದ್ದಕ್ಕಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿ ಆಕೆಯನ್ನು ಕೊಲೆ ಮಾಡಿದ್ದ.

ಮುಕ್ತ ನ್ಯಾಯಾಲಯಕ್ಕೆ ವರ್ಗಾವಣೆ ಆದೇಶದಂತೆ ಶರ್ಮಾ ತನ್ನದೇ ಹೆಸರಿನ ಎನ್‌ಜಿಒ ಸಿದ್ಧಾರ್ಥ ವಶಿಷ್ಟ ಫೌಂಡೇಷನ್(ಎಸ್‌ವಿಎಫ್)ನಲ್ಲಿ ಕೆಲಸ ಮಾಡಬೇ ಕಿದೆ. ಕೈದಿಗಳು ಮತ್ತು ಅವರ ಮಕ್ಕಳ ಪುನರ್ವಸತಿಗಾಗಿ ತಾನು ಕೆಲಸ ಮಾಡುತ್ತಿರುವುದಾಗಿ ಈ ಎನ್‌ಜಿಒ ಹೇಳಿಕೊಂಡಿದೆ.

ಮುಕ್ತ ಕಾರಾಗೃಹದಲ್ಲಿನ ಕೈದಿಗಳು ಹೊರಗೆ ಕೆಲಸ ಮಾಡಲು ಅವಕಾಶವಿದೆ. ಅವರು ನಗರದಿಂದ ಹೊರಗೆ ಹೋಗುವಂತಿಲ್ಲ ಮತ್ತು ಆದೇಶದಲ್ಲಿ ಉಲ್ಲೇಖಿಸಿರುವ ಕೆಲಸದ ಸ್ಥಳ ಬಿಟ್ಟು ಬೇರೆ ಎಲ್ಲಿಯೂ ಕಾಲ ಕಳೆಯುವಂತಿಲ್ಲ.

ಕೊಲೆ ಆರೋಪದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ವಿಜಯ ಮತ್ತು ಹಾಶಿಂ ಸೇರಿದಂತೆ ಐವರು ಇತರ ಕೈದಿಗಳನ್ನೂ ಮುಕ್ತ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಇವರಿಬ್ಬರೂ ನ್ಯಾಯಾಲಯ ಸಂಕೀರ್ಣವೊಂದರ ಬಳಿ ತಿಹಾರ ಜೈಲಿನ ಕೈದಿಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇತರ ಮೂವರು ಕೈದಿಗಳ ಕುರಿತು ವಿವರಗಳು ಗೊತ್ತಾಗಿಲ್ಲ.

ಶರ್ಮಾನ ಎನ್‌ಜಿಒದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ಕಚೇರಿಯ ವಿಳಾಸಕ್ಕೆ ಸುದ್ದಿಗಾರರು ತೆರಳಿದ್ದರಾದರೂ ಅದು ಸುಮಾರು ಎಂಟು ತಿಂಗಳುಗಳಿಂದ ಖಾಲಿಯಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ವೆಬ್‌ಸೈಟ್‌ನಲ್ಲಿರುವ ಇನ್ನೊಂದು ವಿಳಾಸಕ್ಕೆ ತೆರಳಿದಾಗ ಅಲ್ಲಿ ಎನ್‌ಜಿಒ ಕಚೇರಿ ತೆರೆದಿತ್ತಾದರೂ ಶರ್ಮಾ ಇರಲಿಲ್ಲ.

ಶರ್ಮಾ ವಾರದಲ್ಲಿ 2-3 ದಿನ ಇಲ್ಲಿಗೆ ಬರುತ್ತಾರೆ ಮತ್ತು ಉಳಿದ ದಿನಗಳಲ್ಲಿ ಕೈದಿಗಳ ಅಗತ್ಯಗಳನ್ನು ಅರಿತುಕೊಳ್ಳಲು ವಿವಿಧ ಜೈಲುಗಳಲ್ಲಿರುವ ಕೈದಿಗಳನ್ನು ಭೇಟಿಯಾಗುತ್ತಾರೆ ಎಂದು ಕಚೇರಿಯಲ್ಲಿದ್ದ ಎಸ್‌ವಿಎಫ್‌ನ ಉದ್ಯೋಗಿ ಕಪಿಲ್ ವೊಹ್ರಾ ಎಂಬಾತ ಸುದ್ದಿಗಾರರಿಗೆ ತಿಳಿಸಿದ್ದಾನೆ.

ಶರ್ಮಾರ ಎನ್‌ಜಿಒ ಕೈದಿಗಳ 700ಕ್ಕೂ ಅಧಿಕ ಮಕ್ಕಳನ್ನು ನೊಡಿಕೊಳ್ಳುತ್ತಿದೆ. ಕೈದಿಗಳು ಬಿಡುಗಡೆಗೊಂಡ ನಂತರ ಅವರಿಗೆ ಉದ್ಯೋಗಗಳನ್ನು ದೊರಕಿಸುತ್ತಿದೆ ಎಂದೂ ವೊಹ್ರಾ ತಿಳಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News