ಬೆಂಗಳೂರು: ಹಿರಿಯ ಸಾಹಿತಿ ಜಿ.ಕೆ.ಗೋವಿಂದರಾವ್‌ರ ‘ಆಲಯ-ಬಯಲು’ ಕೃತಿ ಬಿಡುಗಡೆ

Update: 2018-04-22 16:07 GMT

ಬೆಂಗಳೂರು, ಎ.22: ಜಾತಿ, ಮಹಿಳೆ ಹಾಗೂ ಸ್ಥಾವರ ಪೂಜೆಯ ಕುರಿತು ಬಸವಣ್ಣ, ನೀಲಾಂಬಿಕೆ ಹಾಗೂ ಅಲ್ಲಮಪ್ರಭು ರಚಿಸಿರುವ ವಚನಗಳು ಇರುವವರಿಗೆ ಕನ್ನಡದಲ್ಲಿ ಕ್ರಾಂತಿ ಜೀವಂತವಾಗಿರುತ್ತದೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಿಸಿದರು.

ರವಿವಾರ ಸಿರಿವರ ಪ್ರಕಾಶನ ನಗರದ ಎಚ್.ಎನ್.ಸಮಾಂಗಣದಲ್ಲಿ ಹಿರಿಯ ಸಾಹಿತಿ ಜಿ.ಕೆ.ಗೋವಿಂದರಾವ್‌ರವರ ‘ಆಲಯ-ಬಯಲು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವುದೆ ಒಂದು ಕ್ಷೇತ್ರದಲ್ಲಿ ಕ್ರಾಂತಿ ಸಂಭವಿಸಿದರು, ಅದರ ಪ್ರಭಾವ ಮತ್ತಿತರ ಕ್ಷೇತ್ರಗಳ ಬೀರಲಿದೆ ಎಂದು ತಿಳಿಸಿದರು.

ಸುಮಾರು 800ವರ್ಷಗಳ ಹಿಂದಿನ ವಚನಕಾರರ ಚಿಂತನೆಗಳು ಇಂದಿಗೂ ಪ್ರಸ್ತುತತೆಯನ್ನು ಪಡೆದುಕೊಂಡಿವೆ. ಅದರಲ್ಲೂ ಬಸವಣ್ಣನ ‘ಚೆನ್ನಯ್ಯನ ಮನೆಯ ದಾಸಿಯ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು ಇಬ್ಬರು ಹೊಲಕ್ಕೆ ಸೆಗಣಿಗೆ ಹೋಗಿ ಸಂಗವ ಮಾಡಿದರು. ಇವರಿಬ್ಬರಿಗೂ ಹುಟ್ಟಿದ ಮಗ ನಾನು’ ಎಂಬ ವಚನವು ಜಾತಿ ವ್ಯವಸ್ಥೆಗೆ ಕ್ರಾಂತಿಕಾರಕ ಪೆಟ್ಟು ನೀಡಿದೆ ಎಂದು ಅವರು ತಿಳಿಸಿದರು.

ವಿದ್ವತ್‌ಪೂರ್ಣ ಬರಹಗಳನ್ನು ಬರೆದಿರುವ ಹಾಗೂ ಬರೆಯುತ್ತಿರುವ ಹಿರಿಯ ಸಾಹಿತಿ ಗೋವಿಂದರಾವ್, ನಮ್ಮ ಸುತ್ತಮುತ್ತ ನಡೆಯುವ ಗಂಭೀರ ವಿಷಯಗಳ ಕುರಿತು ವಾಚಕರ ವಾಣಿಗೆ ಪತ್ರ ಬರೆಯುವಂತಹ, ಆ ಮೂಲಕ ವಿಷಯಗಳನ್ನು ಚರ್ಚೆ ಹಾಗೂ ವಾಗ್ವಾದಕ್ಕೆ ವೇದಿಕೆ ಕಲ್ಪಿಸುತ್ತಾರೆ. ಇದು ಅವರ ಸಮಾಜಮುಖಿ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿಕಾರ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, ಪ್ರಜಾತಂತ್ರದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುವ, ಚರ್ಚಿಸುವ ಹಕ್ಕಿದೆ. ಹೀಗಾಗಿ ಇತರೆ ಮತೀಯ ಧರ್ಮಗಳಿಗಿಂತ ಪ್ರಜಾತಂತ್ರವೆ ಧರ್ಮವಾಗಿ ರೂಪಗೊಳ್ಳಬೇಕಾಗದ ಅಗತ್ಯವಿದೆ ಎಂದು ಆಶಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಡಿಎಸ್ಸೆಸ್ ಕಾರ್ಯಕರ್ತರ ಚಿಂತನೆಗಳನ್ನು ರೂಪಿಸುವಲ್ಲಿ ಹಿರಿಯ ಸಾಹಿತಿ ಜಿ.ಕೆ.ಗೋವಿಂದರಾವ್ ಮುಖ್ಯವಾದ ಪಾತ್ರ ವಹಿಸಿದ್ದಾರೆ. ಇದರ ಜೊತೆಗೆ ಎಲ್ಲ ಪ್ರಗತಿಪರ ಚಳವಳಿಗಳಲ್ಲಿಯೂ ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಆಲಯ-ಬಯಲು ಕೃತಿಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ನ್ಯಾಷನಲ್ ಕಾಲೇಜಿನ ನಾಗರಾಜ್‌ರೆಡ್ಡಿ, ಸಿರಿವರ ಪ್ರಕಾಶನದ ರವೀಂದ್ರ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News